ಯಲ್ಲಾಪುರ ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷರ ಮೇಲೆ ಕರಡಿ ದಾಳಿ

21 ylp 01 (karadi)
Published on

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ. ವ್ಯಾಪ್ತಿಯ ಉಪಳೇಶ್ವರ- ಹುತ್ಕಂಡ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು, ಶನಿವಾರ ಬೆಳಗ್ಗೆ ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ ಅವರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿವೆ.

ಆರ್.ಎಸ್. ಭಟ್ಟ ಅವರು ಬೈಕ್ ಮೇಲೆ ಕಸ ವಿಲೇವಾರಿ ಘಟಕದ ಬಳಿ ಮಾಯನಜಡ್ಡಿ ಮಾರ್ಗದಲ್ಲಿ ಸಾಗುತ್ತಿದ್ದಾಗ ಎರಡು ಕರಡಿಗಳು ದಾಳಿ ನಡೆಸಿವೆ. ಮೊದಲು ಅವರ ಕಾಲನ್ನು ಘಾಸಿಗೊಳಿಸಿವೆ. ನಂತರ ಇವರು ಕೂಗಾಡುತ್ತ ಬೈಕ್​ನಲ್ಲಿ ತಪ್ಪಿಸಿಕೊಂಡು ಹೋದಾಗಲೂ ಬೆಂಬಿಡದ ಕರಡಿಗಳು ಮುಂದೆ ಹೋಗಿ ಅಡ್ಡಗಟ್ಟಿ ಮುಖ, ಭುಜ ಹಾಗೂ ತೊಡೆಯ ಭಾಗದಲ್ಲಿ ಗಂಭೀರವಾಗಿ ಘಾಸಿಗೊಳಿಸಿವೆ.

ಎರಡು ಕರಡಿಗಳ ಜತೆ ಒಂದು ಮರಿಯೂ ಇದೆ ಎನ್ನಲಾಗಿದೆ. ಹೇಗೋ ಮುಂದುವರಿದು ಸಮೀಪದ ಒಬ್ಬರ ಮನೆ ಸೇರಿದ ಭಟ್ಟ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಷಯ ತಿಳಿದ ಶಾಸಕ ಶಿವರಾಮ ಹೆಬ್ಬಾರ ತಾಲೂಕಾಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು.

ನಿಯಂತ್ರಣಕ್ಕೆ ಆಗ್ರಹ

ಉಪಳೇಶ್ವರ ಭಾಗದಲ್ಲಿ ಕರಡಿ, ಚಿರತೆಗಳಂತಹ ಪ್ರಾಣಿಗಳ ಉಪಟಳ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ರಾತ್ರಿಯಲ್ಲದೆ, ಹಗಲಿನಲ್ಲಿಯೂ ನಿರ್ಜನ ಒಳ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಶಾಲಾ ಮಕ್ಕಳು ಬೆಳಗ್ಗೆ ಹಾಗೂ ಸಂಜೆ ದೂರದ ಹಳ್ಳಿಗಳಿಗೆ ಸಾಗಬೇಕಿದೆ. ಆ ವೇಳೆ ಪ್ರಾಣಿಗಳು ದಾಳಿ ನಡೆಸಿದರೆ ಗತಿಯೇನು ಎಂಬ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net