

ಹೊಳೆನರಸೀಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಪ್ರಾಂಶುಪಾಲೆ ಆಶಾಜ್ಯೋತಿ ಹೇಳಿದರು.
ಹೊಳೆನರಸೀಪುರ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಎನ್‌ಎಸ್‌ಎಸ್ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯೆಯಿಂದ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳಬಹುದು. ಅತ್ಯುತ್ತಮ ಕೆಲಸ ಪಡೆದುಕೊಳ್ಳಲು ಉತ್ತಮ ಅಂಕದ ಜತೆಗೆ ಸಾಮಾಜಿಕ ಜ್ಞಾನವೂ ಅವಶ್ಯ ಎಂದು ಹೇಳಿದರು.
ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ವೈ. ರಾಜು ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕಾಗಿ ಚಿಂತಿಸಿ ವೈಚಾರಿಕತೆಯಿಂದ ಬೆಳೆಯಬೇಕು. ಮೂಢನಂಬಿಕೆಗಳನ್ನು ಬಿಡಬೇಕು. ಗುರಿ ಸಾಧಿಸುವ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಮಾತನಾಡಿ, ನಾನು ಚೆನ್ನಾಗಿ ಓದುತ್ತೇನೆ. ಅತ್ಯುತ್ತಮವಾದ ಕೆಲಸ ಪಡೆದುಕೊಂಡು ನಾನು ಬದಕನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತೇನೆ ಎನ್ನುವ ದೃಢ ವಿಶ್ವಾಸ ಬೆಳೆಸಿಕೊಳ್ಳಬೇಕು. ಅವಕಾಶ ಸಿಕ್ಕಾಗೆಲ್ಲಾ ನಾಯಕತ್ವ, ಮುಂದಾಳತ್ವ ವಹಿಸಬೇಕು. ಇದರಿಂದ ನಮ್ಮ ಸಾಮಾಜಿಕ ಜ್ಞಾನ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಅಶೋಕ್ ಕಾಲೇಜಿನಲ್ಲಿ ಇರುವ ಸೌಲಭ್ಯಗಳು ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಹಾಗೂ ರೆಡ್ ಕ್ರಾಸ್ ಯೋಜನೆಗಳ ಬಗ್ಗೆ ವಿವರಿಸಿದರು.
ಪ್ರಾಧ್ಯಾಪಕರಾದ ಫಕೀರಮ್ಮ ಮುರುಗೋಡ್, ಸುನೀಲ್, ಜಯಚಂದ್ರ ಮಾತನಾಡಿದರು. ಪ್ರಾಧ್ಯಾಪಕ ಗಣೇಶ್, ಕೃಷ್ಣಮೂರ್ತಿ ಇತರರು ಇದ್ದರು.