ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಿ

ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಗ್ಯಾಸ್ ಏಜೆನ್ಸಿಗಳ ನಿರ್ವಹಣೆ ಸಭೆ ನಡೆಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಇದ್ದರು.
ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಗ್ಯಾಸ್ ಏಜೆನ್ಸಿಗಳ ನಿರ್ವಹಣೆ ಸಭೆ ನಡೆಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಇದ್ದರು.
Published on

ಹೊಸಪೇಟೆ: ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್ ಕುರಿತ ಸುರಕ್ಷತಾ ಮಾನದಂಡಗಳನ್ನು ಸಾರ್ವನಿಕರಿಗೆ ತಿಳಿಸಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಡುಗೆ ಸಿಲಿಂಡರ್ ವಿತರಣೆ, ಸಾಗಣೆ ಮತ್ತು ಸಂಗ್ರಹಣೆ ಮಾಡುವ ಗ್ಯಾಸ್ ಏಜೆನ್ಸಿಗಳ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದರು. ಸಿಲಿಂಡರ್ ಗೃಹ ಬಳಕೆದಾರರು ತುರ್ತು ಸಮಯದಲ್ಲಿ 1906 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು. ಗೃಹಬಳಕೆ ಅನಿಲ ಗ್ರಾಹಕರಿಂದ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಬಾರದು. ಗ್ರಾಹಕರಿಂದ ಯಾವುದೇ ದೂರು ಬಂದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಇತ್ತೀಚೆಗೆ ಗಾದಿಗನೂರು ಗ್ರಾಮದಲ್ಲಿ ನಡೆದ ಸಿಲಿಂಡರ್ ಅವಘಡ ಮರುಕಳಿಸದಂತೆ ಗ್ಯಾಸ್ ಏಜೆನ್ಸಿಗಳು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಈ ಬಗ್ಗೆ ಸಿಲಿಂಡರ್ ಬಳಕೆದಾರರಲ್ಲಿ ಜಾಗೃತಿ ಮೂಡಿಸಬೇಕು. ಇಂಥ ಘಟನೆಗಳು ಸಂಭವಿಸಿದರೆ ಸಂಬಂಧಿಸಿದ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಮಾತನಾಡಿ, ಸಿಲಿಂಡರ್ ಗೃಹ ಬಳಕೆದಾರರು ಸಿಲಿಂಡರ್‌ನಿಂದ ಸ್ಟವ್‌ಗೆ ಜೋಡಿಸಿದ ಪೈಪ್‌ನಲ್ಲಿ ತೊಂದರೆ ಕಾಣಿಸಿದರೆ ಕೂಡಲೇ ಗ್ಯಾಸ್ ಏಜೆನ್ಸಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಹಾನಿ ಆಗಬಹುದು. ಸಿಲಿಂಡರ್ ಬೀಳದಂತೆ ಸುರಕ್ಷಿತವಾಗಿ ಇಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net