ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆಗೆ ಕ್ರಮ

Covid
Published on

ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಜಾರಿಗೆ ತರಬೇಕು. ಅದರೊಂದಿಗೆ ರೈತರು, ಕೈಗಾರಿಕೆಗಳು ಸಹಿತ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ, ಚಿಕಿತ್ಸೆ ಕುರಿತ ಸಭೆ ನಡೆಸಿದ ಅವರು, ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆಗೆ ಅನುಕೂಲವಾಗುವಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ಸಮಗ್ರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿ, ಅಗತ್ಯಕ್ಕನುಸಾರವಾಗಿ ಬೆಡ್ ಮಂಜೂರು ಮಾಡಬೇಕು ಎಂದರು.

ಕೋವಿಡ್ ನಿರೋಧಕ ಚುಚ್ಚುಮದ್ದನ್ನು 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಬೇಕು. 45-60 ವರ್ಷ ವಯಸ್ಸಿನವರಿಗೆ 2ನೇ ಬಾರಿ ಲಸಿಕೆ ಆದ್ಯತೆ ಮೇಲೆ ನೀಡಬೇಕು. 18 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ನೀಡಲು ನೋಂದಣಿ ಆರಂಭಗೊಂಡಿದ್ದು, ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಚಿವ ಎಸ್.ಅಂಗಾರ ಮಾತನಾಡಿ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಸೌಲಭ್ಯ ಸಹಿತ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೋವಿಡ್ ರೋಗಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ತುರ್ತುಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ಆದ್ಯತೆ ಮೇಲೆ ಚಿಕಿತ್ಸೆ ನೀಡಬೇಕು. ತಾಲೂಕು ಕೇಂದ್ರಗಳಲ್ಲೂ ಕೋವಿಡ್ ಚಿಕಿತ್ಸೆಗೆ ಆಕ್ಸಿಜನ್, ಐಸಿಯು ಬೆಡ್ ವ್ಯವಸ್ಥೆ ಮಾಡಬೇಕು. ಸಾಧ್ಯವಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಬೆಡ್ ಕಾಯ್ದಿರಿಸಬೇಕು. ಶಾಸಕರು ಸ್ಥಳೀಯವಾಗಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕರಾದ ಭರತ್ ಶೆಟ್ಟಿ ವೈ, ಡಿ.ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ ಯು, ಹರೀಶ್ ಪೂಂಜ, ಉಮಾನಾಥ ಎ.ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್, ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಪಾಲ್ಗೊಂಡಿದ್ದರು.

ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಸದ್ಯ ಆಕ್ಸಿಜನ್ ಕೊರತೆ ಕಂಡುಬಂದಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಗಮನದಲ್ಲಿಟ್ಟು ಆಕ್ಸಿಜನ್ ಪೂರೈಕೆ ನಿರ್ವಹಿಸಲು ಕಾರ್ಯಪಡೆ ರಚಿಸುವುದರೊಂದಿಗೆ ಏಜೆನ್ಸಿಗಳು ಹಾಗೂ ಪೂರೈಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು. ಕೋವಿಡ್ ಚಿಕಿತ್ಸೆಗೆ ಪೂರಕವಾಗುವ ಔಷಧ ಕೊರತೆ ಕಂಡು ಬಂದಿಲ್ಲ. ರೆಮಿಡಿಸಿವಿರ್ ಸಾಕಷ್ಟು ಇದೆ. ಇದನ್ನು ವೈದ್ಯರ ಶಿಫಾರಸಿನಂತೆ ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಬೇಕು. ಸಾಮಾನ್ಯ ಸೋಂಕಿತರಿಗೆ ಅವಶ್ಯಕತೆ ಇಲ್ಲ ಎಂದರು.

ಕಂಪನಿಗಳಿಂದ ವೈದ್ಯಕೀಯ ನೆರವು, ಸಂಸದ ನಳಿನ್ ಮನವಿಗೆ ಸ್ಪಂದನೆ: ಕರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆಕ್ಸಿಜನ್ ಘಟಕಗಳ ನಿರ್ಮಾಣ, ಅಕ್ಸಿಜನ್ ಸಿಲಿಂಡರ್ ಸಹಿತ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಸಂಸದ ನಳಿನ್‌ಕುಮಾರ್ ಕಟೀಲ್ ಜಿಲ್ಲೆಯಲ್ಲಿರುವ ಸರ್ಕಾರಿ ಸಹಭಾಗಿತದ್ವದ ಕಂಪನಿಗಳಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದು, ಎಲ್ಲ ಸಂಸ್ಥೆಗಳ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಕರೊನಾ ಸೋಂಕು ಹೆಚ್ಚಾಗುತ್ತಿದ್ದು, ಸೋಂಕಿತರನ್ನು ಉಳಿಸಿಕೊಳ್ಳುವುದು ಸರ್ಕಾರ ಮತ್ತು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟ ಪರಿಷ್ಥಿತಿಯಲ್ಲಿ ಸರ್ಕಾರಿ ಸಹಭಾಗಿತ್ವದ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳು ಸರ್ಕಾರಕ್ಕೆ ನೆರವಿನ ಹಸ್ತ ಚಾಚಬೇಕು ಎಂದರು.

ಎಂಆರ್‌ಪಿಎಲ್ ವತಿಯಿಂದ ವೆನ್ಲಾಕ್‌ನಲ್ಲಿ 930 ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ, ಎಂಸಿಎಫ್‌ನಿಂದ ಇಎಸ್‌ಐ ಹಾಗೂ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ 80 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕ, ಗೇಲ್ ಇಂಡಿಯಾ ಮತ್ತು ಗೇಲ್ ಗ್ಯಾಸ್ ವತಿಯಿಂದ ಪುತ್ತೂರು, ಬೆಳ್ತಂಗಡಿಯಲ್ಲಿ, ಕೆಐಒಸಿಲ್ ವತಿಯಿಂದ ಉಪ್ಪಿನಂಗಡಿ, ಮೂಡುಬಿದಿರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಇನ್ಫೋಸಿಸ್ ವತಿಯಿಂದ ಉಳ್ಳಾಲದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆ, ಎಂಎಸ್‌ಇಜಡ್ ವತಿಯಿಂದ ಜಿಲ್ಲೆಯಾದ್ಯಂತ ಆಂಬುಲೆನ್ಸ್ ನಿರ್ವಹಣೆ, ಆಂಬುಲೆನ್ಸ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಅವಶ್ಯಕತೆಗೆ ಅನುಗುಣವಾಗಿ ತಕ್ಷಣ ಒದಗಿಸಲು ಕ್ರಮ ವಹಿಸುವುದು, ಭಾರತೀಯ ಉದ್ಯಮಗಳ ಒಕ್ಕೂಟ ಮಂಗಳೂರು ಘಟಕ(ಸಿಐಐ) ವತಿಯಿಂದ ಬಾಡಿಗೆ ಆಧಾರದಲ್ಲಿ 100 ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆ, ಎನ್‌ಎಂಪಿಟಿ ವತಿಯಿಂದ 20 ಡ್ಯೂರೋ ಸಿಲಿಂಡರ್, ಬಿಎಎಸ್‌ಎಫ್ ವತಿಯಿಂದ 20 ಡ್ಯೂರೋ ಸಿಲಿಂಡರ್ ನೆರವು ಒದಗಿಸುವಂತೆ ಸಂಸದರು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಎಲ್ಲ ಸಂಸ್ಥೆಗಳು ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿ ಜಿಲ್ಲಾಡಳಿತಕ್ಕೆ ಅಗತ್ಯ ನೆರವಿನ ಹಸ್ತ ಚಾಚುವುದಾಗಿ ತಿಳಿಸಿದರು. ನೆರವು ನೀಡುವ ಸಂಸ್ಥೆಗಳು ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರೊಂದಿಗೆ ಸಮನ್ವಯ ಸಾಧಿಸಿ ತುರ್ತಾಗಿ ಕ್ರಮ ಕೈಗೊಂಡು ಮೂರು ದಿನಗಳೊಳಗೆ ಕಾರ್ಯಾದೇಶ ನೀಡಿ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಲು ಸಂಸದರು ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾದರೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ಶಾಲೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಸೌಕರ್ಯ ಒಳಗೊಂಡ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net