ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ

ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ
Published on

ಪಿರಿಯಾಪಟ್ಟಣ: ತಾಲೂಕಿನಲ್ಲಿ ಕಳೆದ ಬಾರಿ ಮಳೆಯಾಗದೆ ಬರಗಾಲ ಪರಿಸ್ಥಿತಿ ಎದುರಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು ಯಾವ ಗ್ರಾಮಗಳಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಕೆ.ವೆಂಕಟೇಶ್ ಗ್ರಾ.ಪಂ. ಪಿಡಿಒಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಟಾಸ್‌‌ಕೆೆರ್ಸ್ ಸಮಿತಿ ಸಭೆ ನಡೆಸಿ ಪಿಡಿಒಗಳಿಂದ ಮಾಹಿತಿ ಪಡೆದು ಮಾತನಾಡಿದರು. ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಲ್ಲಿ ಅನುದಾನದ ಬಗ್ಗೆ ಚಿಂತಿಸಬೇಡಿ. ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಬಳಿ ಈಗಾಗಲೇ ಹಣವಿದ್ದು, ಆ ಹಣ ಬಳಸಿಕೊಂಡು ಕೂಡಲೇ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಿ ಎಂದು ತಿಳಿಸಿದರು.

ಪ್ರತಿ ಗ್ರಾಮ ಪಂಚಾಯಿತಿ ಪಿಡಿಒಗಳ ಬಳಿ ಪ್ರತ್ಯೇಕವಾಗಿ ಮಾಹಿತಿ ಪಡೆದ ಸಚಿವರು ಕೆಲವೆಡೆ ರಿ ಡ್ರಿಲ್ಲಿಂಗ್ ಮಾಡುವುದು, ಅಗತ್ಯವಿದ್ದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸುವುದು, ಕಾವೇರಿ ನದಿಯಿಂದ ನೀರು ಪೂರೈಕೆ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳು ಸಮರ್ಪಕ ರೀತಿಯಲ್ಲಿ ನೀರು ಪೂರೈಕೆ ಮಾಡುವ ಬಗ್ಗೆ ಸಭೆಯಲ್ಲಿ ಸಲಹೆ ನೀಡಿದರು.

ತಾಪಂ ಇಒ ಸುನೀಲ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತಹ ಪರಿಸ್ಥಿತಿ ಇದುವರೆಗೂ ಉದ್ಭವಿಸಿಲ್ಲ, ಚಿಕ್ಕವಡ್ಡರ ಕೇರಿ, ವಡ್ಡರಹಳ್ಳಿ, ಕೆ.ಎಂ.ಕೊಪ್ಪಲು, ಹೊನ್ನಾಪುರ, ದೊಡ್ಡ ಕಮರವಳ್ಳಿ, ಕೆಎಸ್‌ಕೆ ನಗರ ಸೇರಿದಂತೆ 11 ಗ್ರಾಮಗಳಲ್ಲಿ ಸಮಸ್ಯೆಗಳು ಕಂಡುಬಂದಿದ್ದು ಇದನ್ನು ಬಗೆಹರಿಸಲಾಗುತ್ತಿದೆ ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಿ ನೀರಿನ ಕೊರತೆ ಕಂಡು ಬರುವ ಸಾಧ್ಯತೆ ಇದೆ ಎಂಬ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ರೈತರ ಖಾಸಗಿ ಬೋರ್‌ವೆಲ್‌ಗಳನ್ನು ಗುತ್ತಿಗೆ ಪಡೆಯಲು ಒಪ್ಪಂದ ಮಾಡಿಕೊಂಡು ನೀರಿನ ಅಭಾವವಾದರೆ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಸೆಸ್ಕ್ ಎಂ.ಡಿ. ಶೀಲಾ ಮಾತನಾಡಿ, ಕುಸುಮ್ ಯೋಜನೆಯ ಬಗ್ಗೆ ಮಾಹಿತಿ ನೀಡಿ ರೈತರಿಗೆ ನೀಡುತ್ತಿರುವ ವಿದ್ಯುತ್ ಈಗ ಏಳು ಗಂಟೆ ಮಾತ್ರವಾಗಿದ್ದು, ಇದನ್ನು 12 ಗಂಟೆಗಳಿಗೆ ವಿಸ್ತರಿಸುವ ಸಲುವಾಗಿ ಕುಸುಮ್ ಯೋಜನೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯಲ್ಲಿ ವಿದ್ಯುತ್ ಉಪ ವಿತರಣಾ ಕೇಂದ್ರದ ವ್ಯಾಪ್ತಿಯ ಐದು ಕಿಲೋಮೀಟರ್ ಒಳಗೆ ಕನಿಷ್ಠ ನಾಲ್ಕರಿಂದ ಐದು ಎಕರೆ ಸರ್ಕಾರಿ ಜಾಗ ಗುರುತಿಸಿ ಇಲಾಖೆಗೆ ನೀಡಿದರೆ ಸೋಲಾರ್ ವಿದ್ಯುತ್ ಪಡೆದು ವಿದ್ಯುತ್ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಸೆಸ್ಕ್ ಎಸ್‌ಇ ಸುನಿಲ್ ಮಾತನಾಡಿ, ಸೋಲಾರ್ ಗೃಹ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು, ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿದರೆ ಆ ಮನೆಯ ಮಾಲೀಕರಿಗೆ ಪ್ರತಿ ಕಿಲೋ ವ್ಯಾಟ್‌ಗೆ ಸರ್ಕಾರ 30 ರೂ. ಸಬ್ಸಿಡಿ ನೀಡಲಿದೆ, ಗರಿಷ್ಠ 3 ಕಿಲೋ ವ್ಯಾಟ್‌ವರೆಗೂ ಈ ಸಬ್ಸಿಡಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಹೊಸದಾಗಿ ಯೋಜನೆಯೊಂದನ್ನು ರೂಪಿಸಿದ್ದು, ರೈತರ 5ಎಚ್‌ಪಿ ಐಪಿಸೆಟ್‌ಗಳಿಗೆ 1 ಲಕ್ಷ ರೂ. ಪಾವತಿಸಿದರೆ ಸರ್ಕಾರ 3 ಲಕ್ಷ ರೂ. ವೆಚ್ಚ ಮಾಡಿ ಒಟ್ಟು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಐಪಿ ಸೆಟ್ ಅಳವಡಿಸಿಕೊಡಲಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳು 25 ಕೋಟಿ ರೂ. ಗೂ ಹೆಚ್ಚು ವಿದ್ಯುತ್ ಬಾಕಿಯನ್ನು ಸೆಸ್ಕ್‌ಗೆ ಪಾವತಿಸಬೇಕಿದ್ದು, ನಾವು ಸಹ ವಿದ್ಯುತ್ ಖರೀದಿಸಿ ನಿಮಗೆ ನೀಡುತ್ತಿದ್ದೇವೆ, ಆದ್ದರಿಂದ ಕೂಡಲೇ ವಿದ್ಯುತ್ ಬಿಲ್ ಪಾವತಿಸಿ ಎಂದು ಸೆಸ್ಕ್ ಎಂಡಿ ಶೀಲಾ ಗ್ರಾಪಂ ಪಿಡಿಒ ಗಳಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಕುಂಜಿ ಅಹಮದ್, ಪುರಸಭೆ ಸದಸ್ಯ ಎಚ್.ಕೆ.ಮಂಜುನಾಥ್, ರವಿ, ಕಾಂಗ್ರೆಸ್ ತಾಲೂಕು ಖಜಾಂಚಿ ಬಿ.ಜೆ. ಬಸವರಾಜ್, ಸೆಸ್ಕ್ ಎಇಇ ಗುರು ಬಸವರಾಜ ಪ್ರಭು, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಎಇಇ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net