

ವಿರಾಜಪೇಟೆ: ಗೌರಿ-ಗಣೇಶ ಉತ್ಸವ ಹಾಗೂ ಈದ್ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಆದರೆ, ಆಯೋಜಕರು ಕಾನೂನು ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಹೇಳಿದರು.
ವಿರಾಜಪೇಟೆ ನಗರ ಠಾಣೆಯ ಆವರಣದಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರೊಂದಿಗೆ ಬುಧವಾರ ಶಾಂತಿ ಸಭೆ ನಡೆಸಿ ಮಾತನಾಡಿದರು.
ನ್ಯಾಯಾಲಯದ ಆದೇಶದಂತೆ ಉತ್ಸವ ಸಮಿತಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಗಣಪತಿ ವಿಸರ್ಜನೆ ಯಾತ್ರೆಯಲ್ಲಿ ಡಿಜೆಗಳನ್ನು ಬಳಸಲು ಅವಕಾಶವಿಲ್ಲ. ವಿಸರ್ಜನೆಯ ಸಂದರ್ಭ ವಾದ್ಯಗೋಷ್ಠಿ ಹಾಗೂ ಇನ್ನಿತರ ಸಂಗೀತ ಉಪಕರಣಗಳ ಬಳಕೆಗೆ ಅವಕಾಶವಿದ್ದು, ಆಯೋಜಕರು ಸಹಕರಿಸುವಂತೆ ಕೋರಿದರು.
ಸೆ.17ರ ಸಂಜೆ ಯಿಂದ 1ರ ಬೆಳಗ್ಗೆವರೆಗೂ ಉತ್ಸವ ಮೂರ್ತಿಗಳ ಶೋಭಾಯಾತ್ರೆ ಇರುವುದರಿಂದ 17ರ ಸಂಜೆ 5ಗಂಟೆಯಿಂದ ಪಟ್ಟಣದ ಒಳಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸೆ.16ರಂದು ನಡೆಯುವ ಈದ್‌ಮಿಲಾದ್ ಮೆರವಣಿಗೆಯುಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು.
ಡಿವೈಎಸ್ಪಿ ಮೋಹನ್ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಕೋರಿದರು. ನಗರ ಠಾಣಾಧಿಕಾರಿ ಪ್ರಮೋದ್ ಇತರರು ಇದ್ದರು.