

ಪ್ರಶಾಂತ ರಿಪ್ಪನ್ಪೇಟೆ ಬೆಂಗಳೂರು : ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದ ಪರಿಣಾಮ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸದಾ ವಾಹನಗಳಿಂದ ತುಂಬಿರುವ ಬಿಇಎಲ್ ಸರ್ಕಲ್ ಸುತ್ತಮುತ್ತ ರಸ್ತೆಗುಂಡಿಗಳು ಮಿತಿಮೀರಿದ್ದು ಜನರ ಪರಿಸ್ಥಿತಿ ಹೇಳತೀರದಂತಾಗಿದೆ. ನಗರದ ಹಲವು ಪ್ರಮುಖ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಬಿಇಎಲ್ ಸರ್ಕಲ್ ಅತಿಹೆಚ್ಚು ವಾಹನ ಸಂಚಾರವನ್ನು ಹೊಂದಿದೆ. ಆದರೆ ಬಿಇಎಲ್ ಸರ್ಕಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಗುಂಡಿಗಳ ಪ್ರಮಾಣ ಹೆಚ್ಚಾಗಿ ವಾಹನ ಸವಾರರು ತತ್ವಾರ ಪಡುವಂತಾಗಿದೆ. ವಿದ್ಯಾರಣ್ಯಪುರ, ಎಂ.ಎಸ್.ಪಾಳ್ಯ ಕಡೆಯಿಂದ ಯಲಹಂಕ, ಹೆಬ್ಬಾಳ ಮೂಲಕ ಕೆ.ಆರ್.ಪುರ, ಮತ್ತಿಕೆರೆ ಮಾರ್ಗವಾಗಿ ಮೆಜೆಸ್ಟಿಕ್ ಮತ್ತು ಮಾರ್ಕೆಟ್ ಹಾಗೂ ರಿಂಗ್ ರಸ್ತೆ ಮೂಲಕ ಗೊರಗುಂಟೆಪಾಳ್ಯದ ಕಡೆಯಿಂದ ತುಮಕೂರು ರಸ್ತೆಗೆ ಹೋಗುವ ಎಲ್ಲ ವಾಹನಗಳು ಬಿಇಎಲ್ ಸರ್ಕಲ್ ಮೂಲಕವೇ ಹಾದುಹೋಗಬೇಕಿರುವುದರಿಂದ ಇದು ಹೈಟ್ರಾಫಿಕ್ ಪಾಯಿಂಟ್ ಎಂದೇ ಗುರುತಿಸಿಕೊಂಡಿದೆ. ಜೊತೆಗೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಲೆಕ್ಕವಿಲ್ಲದಷ್ಟು ಗುಂಡಿಗಳಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಶಾಲೆ ಮತ್ತು ಕಚೇರಿ ಸಮಯ ಹಾಗೂ ಸಂಜೆಯ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ತ್ರಾಸದಾಯಕ. ಬಿಇಎಲ್ ಸರ್ಕಲ್‌ನಿಂದ ಎಂ.ಎಸ್.ಪಾಳ್ಯ ಕಡೆ ಹೋಗುವ ಮಾರ್ಗದಲ್ಲಿ ಮಹಾಲಸ ಹೋಟೆಲ್ ಸಮೀಪ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ಇತ್ತೀಚೆಗೆ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ಒಂದಕ್ಕೊಂದು ವಾಹನಗಳ ನಡುವೆ ಡಿಕ್ಕಿಯಾಗಿದ್ದು, ಸಂಚಾರ ಪೊಲೀಸರು ತಾತ್ಕಾಲಿಕವಾಗಿ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ. ಆದರೆ ಮಳೆ ಬಂದಾಗ ಕೆಸರಿನಂತಾಗುವ ರಸ್ತೆ, ಬಿಸಿಲು ಹೆಚ್ಚಾದಾಗ ವಾಹನ ಸವಾರರ ಕಣ್ಣಿಗೆ ಧೂಳು ಬೀಳುವಂತಾಗಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೇ ವಾಹನ ಚಲಾಯಿಸುವ ಚಾಲಕರ ಪರಿಸ್ಥಿತಿ ಬಹಳ ಕಷ್ಟಕರವಾಗಿದ್ದು, ‘ಯಾರಿಗಾದರೂ ಹೇಳಿ ಈ ರಸ್ತೆ ಕೂಡಲೇ ಡಾಂಬರೀಕರಣ ಮಾಡಿಸಿ, ಪುಣ್ಯಕಟ್ಟಿಕೊಳ್ಳಿ’ ಎಂದು ಹೆಸರು ಹೇಳಲಿಚ್ಚಿಸದ ಬಿಎಂಟಿಸಿ ಚಾಲಕ, ನಿರ್ವಾಹಕರು ವಿಜಯವಾಣಿಗೆ ವಿನಂತಿ ಮಾಡಿದ್ದಾರೆ.
ಸಣ್ಣಪುಟ್ಟ ರಸ್ತೆಗಳಲ್ಲಿ ಆಗಿರುವ ಅವ್ಯವಸ್ಥೆ ಬಗ್ಗೆ ಬಿಬಿಎಂಪಿ ಕ್ಯಾರೆ ಅನ್ನುತ್ತಿಲ್ಲ. ಜನ ಹಿಡಿಶಾಪ ಹಾಕಿದರೂ ಪ್ರಯೋಜನವಾಗದೆ ಕಳೆದ ಒಂದು ವರ್ಷದಿಂದ ಗುಂಡಿ ಬಿದ್ದ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಆದರೆ ಇತ್ತಿಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮುಖ್ಯರಸ್ತೆಗಳ ಪರಿಸ್ಥಿತಿ ಕೂಡಾ ತೀರಾ ಹದಗೆಟ್ಟಿವೆ. ಆದರೆ ಚುನಾಯಿತ ಆಡಳಿತವಿಲ್ಲದೆ ಅಧಿಕಾರಿಗಳೇ ದರ್ಬಾರು ನಡೆಸುತ್ತಿರುವ ಬಿಬಿಎಂಪಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಸಾರ್ವಜನಿಕರು ಎಷ್ಟೇ ದೂರು ಕೊಟ್ಟರೂ ಡೋಂಟ್ ಕೇರ್ ಎಂಬ ಧೋರಣೆಯನ್ನೆ ಅನುಸರಿಸುತ್ತಿದೆ. ರಸ್ತೆಗುಂಡಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ರಸ್ತೆಗುಂಡಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಬಿಬಿಎಂಪಿಗೆ ಹಲವು ಬಾರಿ ಚಾಟಿ ಬೀಸಿದೆಯಾದರೂ ಸಮಸ್ಯೆ ಮಾತ್ರ ಸಂಪೂರ್ಣವಾಗಿ ಬಗೆಹರಿದಿಲ್ಲ. ಜನರ ಕಣ್ಣೊರೆಸುವುದಕ್ಕಾಗಿ ಈಗಾಗಲೇ ಕೆಲ ಕಡೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿಗೆ ಬಿಬಿಎಂಪಿ ಮುಂದಾಗಿದೆಯಾದರೂ ರಾತ್ರಿ ಹಾಕಿದ ಡಾಂಬರು ಬೆಳಗ್ಗೆ ಅನ್ನುವಷ್ಟರಲ್ಲಿ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಬೆಂಗಳೂರಿನ ರಿಂಗ್ ರಸ್ತೆಗಳಲ್ಲಿ ಗೊರಗುಂಟೆಪಾಳ್ಯದಿಂದ ಹೆಬ್ಬಾಳದವರೆಗೆ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯ. ಭಾರೀ ಸರಕು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದು ಸಂಚಾರ ದಟ್ಟಣೆಗೆ ಒಂದು ಕಾರಣ. ಈ ಮಧ್ಯದಲ್ಲಿ ಬಿಇಎಲ್ ಸರ್ಕಲ್ ಸುತ್ತಮುತ್ತಲಿನ ರಸ್ತೆಗುಂಡಿಗಳು, ಕೆಲ ಕಾಮಗಾರಿಗಳು ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿವೆ. ಮತ್ತಿಕೆರೆ ಮೇಲ್ಸೇತುವೆಯಿಂದ ರಾಮಯ್ಯ ಕಾಲೇಜುವರೆಗೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಬೆಸ್ಕಾಂನ ಬೃಹತ್ ಕೇಬಲ್ ಅಳವಡಿಕೆ ಕಾಮಗಾರಿಯಿಂದ ರಸ್ತೆಯ ಒಂದುಭಾಗ ಬ್ಯಾರಿಕೇಡ್‌ನಿಂದ ವಿಭಜಿಸಲಾಗಿದೆ. ಇದರಿಂದ ಸರದಿ ಸಾಲಿನಲ್ಲಿ ವಾಹನಗಳು ಸಂಚರಿಸಬೇಕಾಗಿದ್ದು, ತಡರಾತ್ರಿವರೆಗೂ ಸಂಚಾರ ದಟ್ಟಣೆ ಇರುತ್ತದೆ.