'ಏಕ ಬಳಕೆಯ ಪ್ಲಾಸ್ಟಿಕ್' ಕುರಿತು ಇರಲಿ ಎಚ್ಚರ! Single Use Plastic

Single Use Plastic
Published on

Single Use Plastic : ಭಾರತದ ಯಾವುದೇ ಭಾಗದಲ್ಲಿ ಸಾಗುವಾಗ ರಸ್ತೆಯುದ್ದಕ್ಕೂ ಪ್ರಯಾಣಿಕರು

Nandini Lakshmikantha

ಉಪಯೋಗಿಸಿ ಬೀಸಾಡುವ ಖಾಲಿ ಬಾಟಲಿಗಳು, ಪ್ಲಾ ಸ್ಟಿಕ್ ಕವರುಗಳು ಹಾರಾಡುವುದನ್ನು ನಾವು ಸಾಮಾನ್ಯವೆನ್ನುವ ಹಾಗೆ ನೋಡುತ್ತೇವೆ. ಚಲಿಸುವ ವಾಹನಗಳಲ್ಲಿ ಕುಳಿತೇ ಇಷ್ಟು ರ೦ಪ ಮಾಡುವ ಜನರು ಇನ್ನು ಒ೦ದೇ ಸ್ಥಳದಲ್ಲಿ ಸೇರಿದರೆ! ಪರಿಸ್ಥಿತಿಯನ್ನು ವಿವರಿಸುವುದೇ ಬೇಡ. ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಇತ್ತೀಚೆಗೆ ಮುಕ್ತಾಯಗೊoಡ ಮಹಾಕುಂಭಮೇಳಕ್ಕೆ ಆಗಮಿಸಿದ್ದ ಕೋಟಿ ಕೋಟಿ ಸಂಖ್ಯೆಯ ಜನರು ಬೀಸಾಡಿದ ಕಸದಡಿಯಲ್ಲಿ ಪ್ರಯಾಗರಾಜ್ ಮುಚ್ಚಿಹೋಗಬೇಕಿತ್ತು. ಆದರೆ, ಹಾಗೇನೂ ಆಗಲಿಲ್ಲ. ಕಾರಣ ಚುರುಕಾಗಿದ್ದ ಆಡಳಿತ ವ್ಯವಸ್ಥೆ ಮತ್ತು ಸದ್ದು ಗದ್ದಲವಿಲ್ಲದೇ ನಡೆದ 'ಎಕ್ ಥಾಲಿ ಔರ್ ಎಕ್ ಥೈಲಾ ' ಕಾರ್ಯಕ್ರಮ. ಬಗಲಿಗೊ೦ದು ಬ್ಯಾಗು ಅದರಲ್ಲಿದ್ದ ತಟ್ಟೆ , ಊಟಕ್ಕಾಗಿ ಆಗಬಹುದಾಗಿದ್ದ ತ್ಯಾಜ್ಯವನ್ನು ಬಹುಪಾಲು ಕಡಿಮೆ ಮಾಡಿತ್ತು. " ಏಕ್ ಥೈಲಾ" ಕಾಯ೯ಕ್ರಮವನ್ನು ಮು೦ದುವರೆಸಿದರೆ ನಮ್ಮ ದೇಶದ ರಸ್ತೆ ಪಕ್ಕದ ಅರ್ಧ ಕೊಳೆ ಕಡಿಮೆಯಾದೀತು! ವಿಶ್ವದಲ್ಲೇ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಹಾಕತ್ತಿರುವ ದೇಶವೆನ್ನುವ ಭಾರವೂ ಕಡಿಮೆಯಾದೀತು ಅಲ್ಲವೇ?

ಮನೆಯಿಂದ ಹೊರಗೆ ಹೊರಡಲು ಕಾರಣಗಳು ನೂರಾರು ನಮಗೆ. ಹೊರ ಹೊರಟವರು ಮರಳಿ ಬರುವಾಗ ಒoದಿಷ್ಟು ಕಸವನ್ನು ಜೊತೆಯಲ್ಲಿ ತರುತ್ತೇವೆ, ಹಾಗಿಲ್ಲದಿದ್ದರೆ ಕಸವನ್ನು ಪರಿಸರದ ಮಡಿಲಿಗೆ ತುಂಬಿ ಬಂದಿರುತ್ತೇವೆ! ನೆನಪಿಸಿಕೊಳ್ಳಿ ಮನೆಗೆ ಬೇಕಾದ ಸಾಮಾನುಗಳನ್ನು ತರುವಾಗ ಪ್ಲಾಸ್ಟಿಕ್ ಚೀಲ/ಬಾಟಲಿಗಳ ರೂಪದಲ್ಲಿ ಮನೆಗೆ ಬಂದ ಕಸವೆಷ್ಟೆಂದು! ವಿಹಾರಕ್ಕಾಗಿ ಕುಟುಂಬ/ಗೆಳೆಯರೊಂದಿಗೆ ಹೊರಟ ನಾವು ಎಸೆದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್​ನ ಅದೆಷ್ಟು ರೂಪಗಳಿದ್ದವೆನ್ನುವುದನ್ನೂ ಲೆಕ್ಕಹಾಕಿ. ಶ್ಯಾಂಪೂನ ಸ್ಯಾಚೆಟ್​ಗಳು, ಚಿಪ್ಸ್​ನ ರಾಪರ್​ಗಳು, ಸ್ಟ್ರಾಗಳು, ಹರಿದ ಚಪ್ಪಲಿಗಳು, ನೀರಿನ ಬಾಟಲಿಗಳು, ಕವರ್​ಗಳು ಹೀಗೆ ನಾನಾ ರೂಪದಲ್ಲಿ ಪ್ಲಾಸ್ಟಿಕ್ ನಮ್ಮ ಕಣ್ಣಮುoದೆ ನರ್ತನ ಮಾಡುವುದಿಲ್ಲವೇ? ದಿ ನೇಚರ್ ಜರ್ನಲ್​ನಲ್ಲಿ ಪ್ರಕಟಿತ ವರದಿಯ ಪ್ರಕಾರ ಭಾರತದಲ್ಲಿ 2024 ರಲ್ಲಿ 9.3 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪನ್ನವಾಗಿತ್ತು. ಅಲ್ಲಿಗೆ ವಿಶ್ವದ 1/5 ಭಾಗದ ಪ್ಲಾಸ್ಟಿಕ್ ತ್ಯಾಜ್ಯ ಭಾರತದಲ್ಲಿ .

ನಮ್ಮ ಜೀವನದ ಭಾಗವಾಗಿರುವ ಪ್ಲಾಸ್ಟಿಕ್ ಅನ್ವೇಷಣೆಯ ಹಿoದೊಂದು ಕಥೆಯಿದೆ. 1863ರ ಅಮೆರಿಕದ ಸಿವಿಲ್ ವಾರ್​ನ ಸಮಯ. ಮೈಕಲ್ ಪಹ್ಲಾನ್ ಎoಬ ಕೈಗಾರಿಕೋದ್ಯಮಿ ಬಿಲಿಯರ್ಡ್ಸ್ ಕ್ರೀಡೆಗೆ ಆನೆಗಳ ದಂತಗಳಿಂದ ತಯಾರಿಸಲಾಗುತ್ತಿದ್ದ ಬಾಲುಗಳ ತಯಾರಿಕೆಗೆ ಪರ್ಯಾತ ವಸ್ತುವಿನ ತಲಾ‍ಷೆಯಲ್ಲಿದ್ದ. ಈ ಪ್ರಯತ್ನಕ್ಕಾಗಿ ಆತ ಬಹುಮಾನವನ್ನೂ ಘೋಷಿಸಿದ್ದ. ಜಾನ್ ವೆಸ್ಲಿ ಹಯಾತ್ ಮತ್ತು ಆತನ ಸಹೋದರ ನೈಟ್ರಿಕ್ ಮತ್ತು ಸಲ್ಫ್ಯೂರಿಕ್ ಆಸಿಡ್ ಗಳನ್ನು ವಿವಿಧ ವಸ್ತುಗಳ ಮೇಲೆ ಪ್ರಯೋಗಿಸಿದರು. ಆಗ ದೊರಕಿದ ಒಂದು ಬಗೆಯ ನೈಟ್ರೋಸೆಲ್ಯುಲೋಸ್ ಅನ್ನು ಕಪೂ೯ರದ ಜೊತೆಗೆ ಸೇರಿಸಿ ಬಿಸಿ ಮಾಡಿದಾಗ ದೊರಕಿದ್ದು ಹೊಳೆವ ಹಾಗೂ ಬಿಸಿಯಾಗಿದ್ದಾಗಲೇ ಯಾವ ಆಕಾರಕ್ಕೂ ಬದಲಿಸಬಹುದಾದ ಉತ್ಪನ್ನ. ಇದು ಪ್ಲಾಸ್ಟಿಕ್ಕಿನ ಮೊದಲ ರೂಪ. ಉದ್ಯಮಿಗಳೂ ಆದ ಅವರು ಕೃತಕ ಹಲ್ಲಿನ ಸೆಟ್, ಬಾಚಣಿಕೆ, ಹೀಗೆ ಅನೇಕ ವಸ್ತುಗಳನ್ನು ಈ ಉತ್ಪನ್ನದಿ೦ದ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ವಿಯಾದರು. ನಂತರದಲ್ಲಿ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಿಕಲೈಟ್( Bakelite), ಪಾಲಿವಿನೈಲ್ (polyvinyl) ಹೀಗೆ ಸಾಕಷ್ಟು ರಸಾಯನಿಕಗಳ ಪ್ರಯೋಗಗಳು ನಡೆದವು. ಇದೀಗ ಮಾನವನ ಅಗತ್ಯಗಳಲ್ಲಿ ಒoದಾಗಿರುವ ಪ್ಲಾಸ್ಟಿಕ್ ನಾನಾ ರೂಪದಲ್ಲಿ ಕೇವಲ ಭೂಮಿಯನ್ನಲ್ಲದೇ ಸಾಗರದ ಆಳವನ್ನೂ ತಲುಪಿದೆ. ಉಪಗ್ರಹದ ಉಡಾವಣೆಯಲ್ಲೂ ಸ್ಥಾನ ಪಡೆದುಕೊoಡಿದೆ.

ಏಷ್ಯಾ ಖಂಡ ಪ್ಲಾಸ್ಟಿಕ್​ನ ದೊಡ್ಡ ಮಾರುಕಟ್ಟೆ. ಭಾರತ ಕೇವಲ ಮಾರುಕಟ್ಟೆಯ ರೂಪದಲ್ಲಲ್ಲದೇ ಅತಿಯಾದ ತ್ಯಾಜ್ಯವನ್ನು ಸೃಷ್ಠಿಸುವ ದೇಶವೆನ್ನುವ ಭಾರವನ್ನೂ ಹೊತ್ತಿದೆ. ಪ್ರಪoಚದ ವಿವಿಧ ದೇಶಗಳಿಗೆ ಹೋಲಿಸಿ ನೋಡುವಾಗ ನಮ್ಮಲ್ಲಿ ಎರಡು ಸಮಸ್ಯೆಗಳು ನಿಚ್ಚಳವಾಗಿ ಕಾಣುತ್ತದೆ. ಮೊದಲನೆಯದಾಗಿ ತ್ಯಾಜ್ಯ ನಿರ್ವಹಣೆಯ ಕುರಿತು ನಿರ್ಲಕ್ಷತೆ, ಎರಡನೆಯದಾಗಿ ಕಾನೂನನ್ನು ಪಾಲಿಸದ ನಮ್ಮ ಸ್ವಭಾವ. ಅದರಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯಲ್ಲಿ ನಮಗಿರುವ ದಿವ್ಯ ನಿರ್ಲಕ್ಷಕ್ಕೆ ನಿಷೇದಿತ ಪ್ಲಾಸ್ಟಿಕ್ ಕವರ್​ಗಳಲ್ಲಿ ನಾವು ಇoದಿಗೂ ಕದ್ದು ಮುಚ್ಚಿ ಸಾಮಾನು ತರುತ್ತಿದ್ದೇವಲ್ಲ!

ನೆನಪಿಡೋಣ ನಿರ್ಬಂಧಿತ ಪ್ಲಾಸ್ಟಿಕ್ ಪರಿಸರ ಮಾಲಿನ್ಯದ ಜೊತೆಗೆ ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ವಿವಿಧ ರೂಪದ ಏಕ ಬಳಕೆಯ ಈ ಉತ್ಪನ್ನಗಳನ್ನು ನವೀಕರಿಸಲಾಗದ ಅಂದರೆ ಪೆಟ್ರೋಲಿಯಂ ನಂತಹ ಸಂಪನ್ಮೂಲಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಿಪಿಏ ಮತ್ತು ಥಾಲೇಟ್ಸ್​ ನಂತಹ ರಾಸಾಯನಿಕಗಳನ್ನೊಳಗೊoಡ ವಸ್ತುಗಳು ಪರಿಸರಕ್ಕೆ ಮಾತ್ರವಲ್ಲದೇ , ನಾವು ಸೇವಿಸುವ ಆಹಾರ ಮತ್ತು ತಂಪಾದ ಪಾನೀಯಗಳಲ್ಲಿ ಸೇರಿ ಹಾರ್ಮೋನುಗಳ ಏರುಪೇರು, ಉಸಿರಾಟದ ತೊಂದರೆ, ಅಜೀಣ೯ ಹಾಗೂ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ನಿಜ ಇoದು ಪರಿಸರ ಸ್ನೇಹಿ ಪ್ಲಾಸ್ಟಿಕ್ ಕವರುಗಳನ್ನು ಅಂಗಡಿಗಳಲ್ಲಿ / ಮಾಲುಗಳಲ್ಲಿ ಬಳಸಲಾಗುತ್ತಿದೆ. ಆದರೆ, ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯತ್ತ ನಾವು ಜಾಗರೂಕರಾಗಬೇಕಿದೆ. ತ್ಯಾಜ್ಯವನ್ನು ಕಡಿಮೆಮಾಡುವತ್ತ ಹೆಜ್ಜೆಯಿಡಬೇಕಿದೆ. ಸರಳ ಪ್ರಯತ್ನಗಳಲ್ಲಿ ಮದುವೆ ಮನೆಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ನೀಡುವ ನೀರಿನ ಬಾಟಲಿಗಳನ್ನು ನಿರಾಕರಿಸುವುದು, ಹೊರಗೆ ಹೊರಟಾಗ ಕೈಯಲ್ಲೊoದು ಕೈ ಚೀಲ ಹಿಡಿದೇ ಹೊರಡುವುದು. ನದಿಯ/ಕರೆಯ ತೀರದಲ್ಲಿ ಅಥವಾ ಪ್ರಯಾಣ ಕಾಲದಲ್ಲಿ ನಾವು ಅತ್ತಿತ್ತ ನೋಡಿ ಮೆತ್ತಗೆ ರಸ್ತೆಯಲ್ಲಿ ಬದಿಯಲ್ಲಿ ಬಿಸಾಕುವ ವಸ್ತುಗಳನ್ನು ಒಂದು ಚೀಲದಲ್ಲಿ ಸಂಗ್ರಹಿಸಿ ಸಮೀಪದ ಕಸದ ತೊಟ್ಟಿಗೋ ಇಲ್ಲವೇ ಮನೆಯಲ್ಲಿರುವ ಒಣ ಕಸದ ತೊಟ್ಟಿಗೆ ಹಾಕುವುದನ್ನು ರೂಢಿ ಮಾಡಿಕೊಳ್ಳೋಣ. ಯಾವ ಪ್ರಚಾರದ ಕುರಿತು ಯೋಚಿಸದೇ ಪ್ರಕೃತಿ ಮಾತೆಯ ಕೆಲಸ ಮಾಡುವ ಪರಿಸರದ ಸೈನಿಕರಾಗೋಣ.

ಲೇಖಕರು: ಪ್ರೊ. ನಂದಿನಿ ಲಕ್ಷ್ಮಿಕಾಂತ. ಪಿಎಚ್‌ಡಿ

ಪ್ರಾಧ್ಯಾಪಕರು, ಲೇಖಕರು ಮತ್ತು ಸಂಶೋಧಕರು, ICSSR ಹಿರಿಯ ಸಹೋದ್ಯೋಗಿ, ಗುಬ್ಬಿಯ ಶ್ರೀ ಚಿದಂಬರ ಸಂಶೋಧನಾ ಸಂಸ್ಥೆಯ ಗೌರವ ಸಂಶೋಧನಾ ನಿರ್ದೇಶಕರು, ಮಣಿಪಾಲ ಸಂವಹನ ಸಂಸ್ಥೆಯ ಮಾಜಿ ನಿರ್ದೇಶಕರು, ಬೆಂಗಳೂರಿನ ರಚಯಿತ ಟ್ರಸ್ಟಿನ ಸಹ-ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net