ಇಡೀ ಪಾಕಿಸ್ತಾನವನ್ನೇ ಭಾರತ ಧ್ವಂಸ ಮಾಡಿಬಿಡಬಹುದು: ಬಚ್ಚಿಟ್ಟುಕೊಳ್ಳಲು ಆಳವಾದ ಬಿಲದ ಅವಶ್ಯಕತೆ ಇದೆ! India

India
Published on

India : ಇಡೀ ಪಾಕಿಸ್ತಾನವನ್ನೇ ಗುರಿಯಾಗಿಸಿಕೊಂಡು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತೀಯ ಮಿಲಿಟರಿ ಪಡೆ ಹೊಂದಿದೆ ಮತ್ತು ಪಾಕಿಸ್ತಾನ ಸೇನೆಯು ತನ್ನ ಪ್ರಧಾನ ಕಚೇರಿಯನ್ನು ರಾವಲ್ಪಿಂಡಿಯಿಂದ ಸ್ಥಳಾಂತರಿಸಿದರೆ, ಅದು ಅಡಗಿಕೊಳ್ಳಲು ತುಂಬಾ ಆಳವಾದ ಬಿಲದ ಅವಶ್ಯಕತೆ ಇದೆ ಎಂದು ಭಾರತೀಯ ಸೇನೆಯ ಉನ್ನತ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.

ಇಡೀ ಪಾಕಿಸ್ತಾನವು ನಮ್ಮ ದಾಳಿಯ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಸೇನೆಯ ವಾಯು ರಕ್ಷಣಾ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸುಮರ್ ಇವಾನ್ ಡಿ ಕುನ್ಹಾ ಅವರು ಸುದ್ದಿ ಸಂಸ್ಥೆ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ನಮ್ಮ ದೇಶದ ಮಿಲಿಟರಿ ಸಾಮರ್ಥ್ಯಗಳನ್ನು ಎತ್ತಿ ತೋರಿಸಿದ್ದಾರೆ.

ಪಾಕಿಸ್ತಾನವನ್ನು ಅದರ ಆಳದುದ್ದಕ್ಕೂ ಎದುರಿಸಲು ಭಾರತವು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಆದ್ದರಿಂದ, ತನ್ನ ವಿಶಾಲ ವ್ಯಾಪ್ತಿಯಿಂದ ಹಿಡಿದು ಕಿರಿದಾದ ಪ್ರದೇಶದವರೆಗೂ, ಅದು ಎಲ್ಲಿಯೇ ಹೋದರು ಇಡೀ ಪಾಕಿಸ್ತಾನವು ನಮ್ಮ ಭಾರತೀಯ ಸೇನೆಯ ವ್ಯಾಪ್ತಿಯಲ್ಲೇ ಇದೆ. ರಾವಲ್ಪಿಂಡಿಯಲ್ಲಿರುವ ಜನರಲ್ ಹೆಡ್‌ಕ್ವಾರ್ಟರ್ಸ್ ಅನ್ನು ಖೈಬರ್ ಪಖ್ತುಂಖ್ವಾಗೆ ಅಥವಾ ಎಲ್ಲಿಗಾದರೂ ಸ್ಥಳಾಂತರ ಮಾಡಲಿ ಆದರೆ, ಅವೆಲ್ಲವೂ ನಮ್ಮ ವ್ಯಾಪ್ತಿಯಲ್ಲಿ ಇದೆ ಎಂದು ಸೇನಾ ಅಧಿಕಾರಿ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಘರ್ಷಣೆಯಲ್ಲಿ, ಭಾರತೀಯ ಪಡೆಗಳು ಹಲವಾರು ಪಾಕಿಸ್ತಾನಿ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡವು. ಅದರಲ್ಲೂ ಗಡಿಯುದ್ದಕ್ಕೂ ಇರುವ ವಾಯುನೆಲೆಗಳನ್ನು ಟಾರ್ಗೆಟ್​ ಮಾಡಲಾಯಿತು. ಆದಾಗ್ಯೂ, ಭಾರತದ ದಾಳಿಯ ಪ್ರಭಾವ ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿವರೆಗೂ ಮುಟ್ಟಿದೆ ಎಂದು ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದನ್ನು ನಾವಿಲ್ಲಿ ನೆನೆಪಿಸಿಕೊಳ್ಳಬಹುದು.

ನಮ್ಮ ಸೇನಾ ಕಾರ್ಯಾಚರಣೆಯ ಯಶಸ್ಸಿಗೆ ದೀರ್ಘ-ಶ್ರೇಣಿಯ ಡ್ರೋನ್‌ಗಳು ಮತ್ತು ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳು ಸೇರಿದಂತೆ ಮುಂದುವರಿದ ಸ್ಥಳೀಯ ತಂತ್ರಜ್ಞಾನದ ಬಳಕೆ ಕಾರಣವೆಂದು ಹೇಳಲಾಗಿದೆ. ಇನ್ನು ಭಾರತದ ದಾಳಿಯ ಬಳಿಕ ನಾಲ್ಕು ದಿನಗಳ ಕಾಲ ಪಾಕಿಸ್ತಾನವು ಪಶ್ಚಿಮ ಗಡಿಯಲ್ಲಿ ಸುಮಾರು 800 ರಿಂದ 1000 ಡ್ರೋನ್‌ಗಳನ್ನು ಹಾರಿಸಿದೆ. ಆದರೆ, ನಮ್ಮ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಂಘಟಿತ ಪ್ರಯತ್ನಗಳಿಂದ ಎಲ್ಲಾ ಡ್ರೋನ್‌ಗಳನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು ಎಂದು ಡಿ ಕುನ್ಹಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ಜನರನ್ನು ಕೊಂದ ಎರಡು ವಾರಗಳ ನಂತರ, ಭಾರತ ಮೇ 7 ರಂದು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿತು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಸೇನೆಯು ಡ್ರೋನ್‌ಗಳು ಮತ್ತು ಗಡಿಯಾಚೆಗಿನ ಗುಂಡಿನ ದಾಳಿಯನ್ನು ಬಳಸಿಕೊಂಡು ಭಾರತೀಯ ಗಡಿ ನಗರಗಳ ಮೇಲೆ ದಾಳಿ ಮಾಡಿತು. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದ ಭಾರತ, ಪಾಕಿಸ್ತಾನ ಹಲವಾರು ಸೇನಾ ನೆಲೆಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿತು. ಇದರಿಂದಾಗಿ ಇಸ್ಲಾಮಾಬಾದ್ ಕದನ ವಿರಾಮ ಮಾತುಕತೆಗಳನ್ನು ಪ್ರಾರಂಭಿಸಬೇಕಾಯಿತು. ಮೇ 10ರಂದು ಎರಡೂ ದೇಶಗಳು ಗುಂಡಿನ ದಾಳಿಯನ್ನು ನಿಲ್ಲಿಸಲು ಒಪ್ಪಂದಕ್ಕೆ ಬಂದವು ಮತ್ತು ಕದನ ವಿರಾಮ ಮುಂದುವರೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net