ಮೋಸದ ಜಾಲದಿಂದ ಜಾಗೃತರಾಗಿರಿ

19blrp1
ದಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು.
Published on

ಬೇಲೂರು: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸ್ಕ್ಯಾಮ್ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಸಹಕಾರ ಕ್ಷೇತ್ರದ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕಿದೆ ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹೇಳಿದರು.

ತಾಲೂಕಿನ ದಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬೇಲೂರು ತಾಲೂಕಿನಲ್ಲಿ 30 ಸಹಕಾರ ಸಂಘಗಳಿದ್ದು, ಅದರಲ್ಲಿ ವ್ಯಾಪಾರ ವಹಿವಾಟಿನೊಂದಿಗೆ ಉತ್ತಮ ದರ್ಜೆಯಲ್ಲಿರುವ ಸಹಕಾರ ಸಂಘದ ಪೈಕಿ ದಬ್ಬೆ ಸಹಕಾರ ಸಂಘವೂ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರೇಳಿಕೊಂಡು ಗ್ರಾಮೀಣ ಭಾಗದ ವಿದ್ಯಾವಂತರನ್ನೇ ಮೊಬೈಲ್ ಹ್ಯಾಕ್‌ಗಳ ಮೂಲಕ ವಂಚಿಸಿ ಲಕ್ಷಾಂತರ ರೂ. ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ಕರ್ಕಿಹಳ್ಳಿ ಗ್ರಾಮದ ವೀರಭದ್ರೇಗೌಡ ಎಂಬುವರ ಖಾತೆಯನ್ನು ಹ್ಯಾಕ್ ಮಾಡಿ 4.80 ಲಕ್ಷ ರೂ. ಲಪಟಾಯಿಸಿದ್ದು ಇದಕ್ಕೆ ಯಾರು ಹೊಣೆ. ಆದ್ದರಿಂದ ಎಲ್ಲ ವಹಿವಾಟನ್ನು ಜಿಲ್ಲಾದ್ಯಂತ ಗಣಕೀಕೃತಗೊಳಿಸಿ ರೈತರಿಗೆ ಮೋಸವಾಗದಂತೆ ಎಚ್ಚರ ವಹಿಸಲಾಗುವುದು. ಈ ಸಾಲಿನಲ್ಲಿ ತಾಲೂಕಿನಲ್ಲಿರುವ 30 ಸಹಕಾರ ಸಂಘಗಳಿಗೆ 165 ಕೋಟಿ ರೂ.ಗೂ ಅಧಿಕ ಸಾಲ ರೈತರಿಗೆ ನೀಡಲಾಗಿದ್ದು, ಇದರ ಸದುಪಯೋಗಪಡಿಸಿಕೊಂಡ ರೈತರು ಮರುಪಾವತಿಯೊಂದಿಗೆ ಸಾಕಷ್ಟು ಜನರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ಕೇವಲ ಸಾಲ ಪಡೆಯುವುದಲ್ಲ, ಸಂಘದ ಅಭಿವೃದ್ಧಿಗೂ ಪ್ರತಿಯೊಬ್ಬ ಷೇರುದಾರರು ಠೇವಣಿ ಇಟ್ಟು ಸಹಕಾರ ಸಂಘ ಬೆಳೆಯುವಂತೆ ಮಾಡಬೇಕು ಎಂದರು.

ದಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಣಸವಳಿ ತಮ್ಮಣ್ಣಗೌಡ ಮಾತನಾಡಿ, ನಮ್ಮ ಸಂಘಕ್ಕೆ 60 ವರ್ಷದ ಇತಿಹಾಸವಿದೆ. ಸಹಕಾರ ಕ್ಷೇತ್ರ ಇಂದು ಹೆಮ್ಮರವಾಗಿ ಬೆಳೆಯಲು ಸಹಕಾರಿಗಳೇ ಕಾರಣ. ಈಗಾಗಲೇ 952 ಜನ ಷೇರುದಾರರಿದ್ದು 20024-25ನೇ ಸಾಲಿನಲ್ಲಿ 2 ಕೋಟಿ ರೂ. ಗೊಬ್ಬರ ವಹಿವಾಟು ನಡೆಸಿ 1.17 ಲಕ್ಷ ರೂ. ಲಾಭ ಹೊಂದಿದೆ. ಜತೆಗೆ ಸರ್ವ ಸದಸ್ಯರ ಹಾಗೂ ಷೇರುದಾರರ ಸಹಕಾರದಿಂದ ಹೆಚ್ಚುವರಿ ಕಟ್ಟಡ ನಿರ್ಮಿಸುವುದರೊಂದಿಗೆ ಅಡೆತಡೆ ಇದ್ದ ಸಂಘದ ಜಾಗ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಷೇರುದಾರರಿಗೆ ಹೆಚ್ಚುವರಿ ಸಾಲ ನೀಡಲು ಜಿಲ್ಲಾ ಬ್ಯಾಂಕ್‌ನಿಂದ ಆರ್ಥಿಕ ಸಹಾಯ ಪಡೆದು ಸಂಘವನ್ನು ತಾಲೂಕಿನಲ್ಲಿ ಪ್ರಥಮ ಸ್ಥಾನಕ್ಕೆ ತರಲು ಎಲ್ಲರ ಸಹಕಾರ ಮುಖ್ಯ ಎಂದರು.

ಸಂಘದ ಮಾಜಿ ಅಧ್ಯಕ್ಷ ತೊಚ ಅನಂತಸುಬ್ಬರಾಯ, ಉಪಾಧ್ಯಕ್ಷ ಬಿ.ಎಚ್.ಸಂತೋಷ್, ನಿರ್ದೇಶಕರಾದ ಪಟೇಲ್ ನಾಗೇಶ್, ಪದ್ಮಾಕ್ಷಿ ಸತ್ಯನಾರಾಯಣ್, ದೊಡ್ಡಯ್ಯ, ಚಂದ್ರಶೇಖರ್, ಲೊಕೇಶ, ಹೊನ್ನೇಗೌಡ, ನೇತ್ರಾವತಿ, ಚೈತ್ರಾ, ಜಯಮ್ಮ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಜಗದೀಶ್ ಇದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net