ಭೂಪರಿವರ್ತನೆ ವಿರುದ್ಧ ಜಾಗೃತರಾಗಿ

ಭೂಪರಿವರ್ತನೆ ವಿರುದ್ಧ ಜಾಗೃತರಾಗಿ
Published on

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪ
ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ವಿರುದ್ಧ ಕೊಡವರು ಜಾಗೃತರಾಗದಿದ್ದರೆ ಅಪಾಯ ಕಾದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆ ಖಂಡಿಸಿ ಸಿಎನ್‌ಸಿ ಸಂಘಟನೆ ವತಿಯಿಂದ ಬಾಳೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮಾನವ ಸರಪಳಿ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಒಂದು ಸಾವಿರ ಮರಗಳನ್ನು ಕಡಿಯಲು ಅನುಮತಿ ಪಡೆದು ಕೋಟ್ಯಂತರ ರೂ. ಬೆಲೆ ಬಾಳುವ ಸುಮಾರು 3ರಿಂದ 4 ಸಾವಿರ ಮರಗಳನ್ನು ಹನನ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಇದರಿಂದ ಕೊಡಗಿನ ಮೇಲಾಗುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತ, ಎಸ್‌ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಿದಾಗ ಮಾತ್ರ ಕೊಡಗನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಬೃಹತ್ ಭೂಪರಿವರ್ತನೆ ವಿರುದ್ಧ ಜೂ.17 ರಂದು ಸಿದ್ದಾಪುರದಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವಿರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಪೋಡಮಾಡ ಜಾನಕಿ, ಮಾಪಂಗಡ ಯಮುನಾ, ಗಾಂಡಂಗಡ ಪ್ರತಿಮಾ, ಅಡ್ಡಂಗಡ ಪೊನ್ನಮ್ಮ, ಅಡ್ಡಂಗಡ ಗ್ರೀಷ್ಮಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net