

ದಾವಣಗೆರೆ: ಹಿಜಾಬ್-ಕೇಸರಿ ಸಂಘರ್ಷ ದಿನೇದಿನೆ ತಾರಕಕ್ಕೆ ಏರುತ್ತಿರುವುದಷ್ಟೇ ಅಲ್ಲ, ನಾನಾ ಬೆಳವಣಿಗೆಗೂ ಕಾರಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಕೋಮುಭಾವನೆ ಕೆರಳಿಸುವಂಥ ಕೆಲಸ ಕೂಡ ನಡೆಯುತ್ತಿರುವುದು ಆತಂಕ ಮೂಡಿಸಿದೆ.
ಹಿಜಾಬ್-ಕೇಸರಿ ಸಂಘರ್ಷದ ನಡುವೆ ಮತೀಯ ಭಾವನೆ ಕೆರಳಿಸುವ, ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಪ್ರಕರಣಗಳೂ ಸಂಭವಿಸಿರುವುದರಿಂದ ರಾಜ್ಯದ ಕೆಲವೆಡೆ ಪೊಲೀಸರು 144 ಸೆಕ್ಷನ್ ವಿಧಿಸಿರುತ್ತಾರೆ.
ಇನ್ನು ಇಲ್ಲೊಂದು ಜಿಲ್ಲೆಯಲ್ಲಿ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸಾರ್ವಜನಿಕರು ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ ಮುಂತಾದೆಡೆ ಸ್ಟೇಟಸ್ ಹಾಕುವ ಮುಂಚೆ ಯೋಚಿಸಿ ಪೋಸ್ಟ್ ಮಾಡುವಂತಾಗಿದೆ.
ದಾವಣಗೆರೆ ಜಿಲ್ಲೆಯ ಯಾವುದೇ ತಾಲೂಕು-ನಗರಗಳಲ್ಲಿ ಯಾರಾದರೂ ಹಿಜಾಬ್-ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟರ್ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ಹಾಕಿದಲ್ಲಿ ಅಂಥವರ ವಿರುದ್ಧ ರೌಡಿಶೀಟರ್ ಅಥವಾ ಕಮ್ಯುನಲ್ ಗೂಂಡಾಶೀಟ್ಗಳನ್ನು ತೆರೆಯಲಾಗುವುದು ಎಂದು ದಾವಣಗೆರೆ ಎಸ್ಪಿ ಸೂಚನೆ ಹೊರಡಿಸಿದ್ದಾರೆ. ಮಾತ್ರವಲ್ಲ ಅಂಥ ಸ್ಟೇಟಸ್ಗಳು ಗಮನಕ್ಕೆ ಬಂದಲ್ಲಿ ಕಾನೂನು ಕೈಗೆತ್ತಿಕೊಳ್ಳದೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.