

* ಡಿ.7ಕ್ಕೆ ಮತದಾನ
* ಅಧಿಕಾರ ಹಿಡಿಯುವುದು ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆ
* ಕ್ಷೇತ್ರ ಮರು ವಿಂಗಡಿಸಿ ಹೊಸ ಮೂರು ಕ್ಷೇತ್ರಗಳ ಸೃಷ್ಟಿ
* ಜಿಲ್ಲೆಯಿಂದ 8 ಕ್ಷೇತ್ರಗಳಿಗೆ ಸ್ಪರ್ಧೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಸ್ಥಳೀಯ ಫೈಟ್‌ಗೂ ಮುನ್ನ ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಗೆ ಮಹೂರ್ತ ನಿಗದಿಯಾಗಿದ್ದು, ಕ್ಷೇತ್ರ ಮರು ವಿಂಗಡಣೆಯಿಂದಾಗಿ ಹೊಸ ಮೂರು ಕ್ಷೇತ್ರಗಳು ಸೇರಿ ಜಿಲ್ಲೆಯ ಒಟ್ಟು 8 ಕ್ಷೇತ್ರಗಳಿಗೆ ಡಿ.7ಕ್ಕೆ ಮತದಾನ ನಡೆಯಲಿದೆ.
ಸ್ಥಳೀಯ ಮುಖಂಡರ ಪಾಲಿಗೆ ಅಗ್ನಿ ಪರೀಕ್ಷೆಯಾಗಿರುವ ಬೆಂಗಳೂರು ನಗರ, ಗ್ರಾಮಾಂತರ ಮತ್ತು ದಕ್ಷಿಣ ಜಿಲ್ಲೆಯನ್ನು ಒಳಗೊಂಡಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಜಿಲ್ಲೆಯ ಒಟ್ಟು 8 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮತದಾನದ ಹಕ್ಕು ಹೊಂದಿರುವ ಪಿಎಸಿಎಸ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಪ್ರತಿನಿಧಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ.
ಹೆಸರಿಗೆ ಮಾತ್ರ ಸಹಕಾರಿ ಕ್ಷೇತ್ರವಾದರೂ ಸಂಪೂರ್ಣ ಹಿಡಿತ ಸಾಧಿಸಲು ರಾಜಕೀಯ ಪಕ್ಷಗಳು ಜಿದ್ದಿಗೆ ಬೀಳುವುದರಿಂದ ಚುನಾವಣೆ ರಂಗೇರುತ್ತದೆ. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣಗೊಂಡಿರುವ ರಾಮನಗರ ಜಿಲ್ಲೆಯಲ್ಲಿ 100 ಪಿಎಸಿಎಸ್‌ಗಳಿದ್ದು, ಈ ಪೈಕಿ ಕ್ಷೇತ್ರ ವಿಗಂಡಣೆಯ ಕಾರಣ ಕೆಲ ಪಿಎಸಿಎಸ್‌ಗಳ ಕ್ಷೇತ್ರಗಳೂ ಬದಲಾಗಿವೆ.
ಈ ಮೊದಲು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕೇವಲ ತಾಲೂಕಿಗೆ ಒಂದರಂತೆ ನಿರ್ದೇಶಕರ ಆಯ್ಕೆ ನಡೆಯುತ್ತಿತ್ತು. ಈಗ ಹಾರೋಹಳ್ಳಿ ಹೊಸ ತಾಲೂಕು ಆಗಿರುವ ಕಾರಣ ಕನಕಪುರ ಎರಡು ಹೋಳಾಗಿ ಹಾರೋಹಳ್ಳಿ ಹೊಸ ಕ್ಷೇತ್ರವಾಗಿ ಉದಯಿಸಿದೆ. ಇದರ ಜತೆಗೆ ಕೈಲಾಂಚ ಹೋಬಳಿಯ 6, ಯಶವಂತಪುರ ವಿಧಾನಸಭೆ ಕ್ಷೇತ್ರದ ತಾವರೆಕೆರೆಯ 7 ಮತ್ತು ಬಿಡದಿ ಹೋಬಳಿಯ 6 ಪಿಎಸಿಎಸ್‌ಗಳನ್ನು ಒಳಗೊಂಡ ಬೆಂಗಳೂರು ದಕ್ಷಿಣ ಕ್ಷೇತ್ರ, ಮತ್ತು ಮಾಗಡಿಯ ಸೋಲೂರಿನ 8 ಹಾಗೂ ನೆಲಮಂಗಲದ 8 ಪಿಎಸಿಎಸ್ ಒಳಗೊಂಡ ಸೋಲೂರು ಕ್ಷೇತ್ರಗಳು ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ರಚನೆಯಾಗಿವೆ. ಇದರ ಜತೆಗೆ ರಾಮನಗರ ಕ್ಷೇತ್ರಕ್ಕೆ ಚನ್ನಪಟ್ಟಣದ ಮಾಕಳಿ, ವಂದಾರಗುಪ್ಪೆ, ಬ್ರಹ್ಮಣೀಪುರ ಮತ್ತು ಮಾಗಡಿಯ ವೀರೇಗೌಡನದೊಡ್ಡಿ ಪಿಎಸಿಎಸ್‌ಗಳು ಸೇರ್ಪಡೆಯಾಗಿವೆ.
ಹಿಂದಿನ ನಾಲ್ಕು ಕ್ಷೇತ್ರಗಳ ಮತ್ತು ಎಂಪಿಸಿಎಸ್‌ನಿಂದ ಆಯ್ಕೆಗೊಳ್ಳುವ ಒಂದು ಸ್ಥಾನ ಸೇರಿ ಒಟ್ಟು 5 ಹಾಗೂ ಹೊಸ 3 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿವೆ.
ಜಿಲ್ಲೆಯಲ್ಲಿ ಹಳೇ ಕ್ಷೇತ್ರಗಳಾದ ಮಾಗಡಿ, ಕನಕಪುರ ಮತ್ತು ರಾಮನಗರದಲ್ಲಿ ಕಾಂಗ್ರೆಸ್ ತನ್ನ ಗೆಲುವು ಮುಂದುವರಿಸಿಕೊಂಡು ಹೋಗುವ ವಾತಾವರಣವಿದ್ದರೆ, ಜೆಡಿಎಸ್ ತೆಕ್ಕೆಯಲ್ಲಿರುವ ಚನ್ನಪಟ್ಟಣವನ್ನು ಕಾಂಗ್ರೆಸ್ ಸುಪರ್ದಿಗೆ ಪಡೆಯಲು ಸ್ವತಃ ಶಾಸಕ ಸಿ.ಪಿ.ಯೋಗೇಶ್ವರ್ ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಲಿರುವ ಲಿಂಗೇಶ್ ಕುಮಾರ್ ಬಿರುಸಿನ ಪ್ರಚಾರಕ್ಕೆ ಇಳಿದಿದ್ದಾರೆ. ಈ ಮೂಲಕ ರಾಜಕೀಯ ಎದುರಾಳಿಯಾಗಿ ಗುರುತಿಸಿಕೊಂಡಿರುವ ಕುಕ್ಕೂರುದೊಡ್ಡಿ ಜಯರಾಮ್ ಸೋಲಿಸಲು ಪಣ ತೊಟ್ಟಿದ್ದಾರೆ.
ಉಳಿದಂತೆ ಹೊಸ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣಕ್ಕೆ ಜೆಡಿಎಸ್‌ನಿಂದ ಮಾಜಿ ನಿರ್ದೇಶಕ ಅಶ್ವತ್ಥ್ ಮತ್ತು ಬಿಡದಿಯ ಚಂದ್ರಣ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ ಬೆಂಬಲಿತರ ಆಯ್ಕೆ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮತ್ತು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಹಮತದ ಮೂಲಕವೇ ಆಗಬೇಕಿದೆ.
ಹಾರೋಹಳ್ಳಿ, ಕನಕಪುರ ಮತ್ತು ಸೋಲೂರಿಗೆ ಎರಡು ಪಕ್ಷಗಳ ಬೆಂಬಲಿತ ಅ‘್ಯರ್ಥಿಗಳ ಆಯ್ಕೆ ಆಗಬೇಕಿದೆ. ಈ ಬಾರಿ ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಬಾರಿಸಲು ಸರ್ವ ಪ್ರಯತ್ನ ಮಾಡುತ್ತಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಗೆಲುವಿನ ದಡ ಸೇರುವುದೇ ಎನ್ನುವ ಪ್ರಶ್ನೆ ಕಾಡಿದೆ.
ಜಿಲ್ಲೆಯಲ್ಲಿ ಮಾಗಡಿಯಲ್ಲಿ ಎಚ್.ಎನ್.ಅಶೋಕ್ ಅವಿರೋ‘ ಆಯ್ಕೆ ಬಹುತೇಕ ಖಚಿತವಾಗಿದೆ. ಇನ್ನು ಕನಕಪುರದಲ್ಲಿ ಹಾಲಿ ನಿರ್ದೇಶಕ ಎಸ್.ರವಿ ಈ ಬಾರಿ ಹಾರೋಹಳ್ಳಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯ್ಯವಾಗಿದೆ. ಒಂದು ವೇಳೆ ಎಸ್.ರವಿ ಹಾರೋಹಳ್ಳಿಯಿಂದ ಸ್ಪರ್ಧೆ ನಿಜವೇ ಆದರೆ ಮತ್ತು ಕನಕಪುರದಿಂದ ವಿಜಯ ದೇವ್ ಸ್ಪರ್ಧಿಸಲಿದ್ದಾರೆ. ಈ ಎರಡೂ ಕ್ಷೇತ್ರಗಳು ಅವಿರೋಧ ಆಯ್ಕೆ ಆಗಲಿವೆ ಎನ್ನುವುದು ಕಾಂಗ್ರೆಸ್ ವಿಶ್ವಾಸ. ಇನ್ನು ರಾಮನಗರ ಕ್ಷೇತ್ರದ ಹಾಲಿ ನಿರ್ದೇಶಕ ವೈ.ಎಚ್.ಮಂಜು ಗೆಲುವಿಗೆ ಹತ್ತಿರದಲ್ಲಿಯೇ ಇದ್ದರೂ, ಪ್ರತಿಸ್ಪರ್ಧಿ ಯಾರು ಎನ್ನುವುದು ಎಲ್ಲವನ್ನೂ ನಿಶ್ಚಯ ಮಾಡಲಿದೆ. ಉಳಿದಂತೆ ಚನ್ನಪಟ್ಟಣ, ಸೋಲೂರು, ಬೆಂಗಳೂರು ದಕ್ಷಿಣ ಕ್ಷೇತ್ರಗಳು ಜಿದ್ದಾ ಜಿದ್ದಿನ ವೇದಿಕೆ ನಿರ್ಮಿಸಲಿವೆ.
==