

ಪಾಂಡವಪುರ: ಗ್ರಾಮಗಳಲ್ಲಿ ಬಿಎಂಸಿ ಕೇಂದ್ರಗಳನ್ನು ತೆರೆದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಮತ್ತು ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಬಿಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಬಿಎಂಸಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಬಿಂಡಹಳ್ಳಿ ಮತ್ತು ಸುತ್ತಲಿನ ಗ್ರಾಮದ ರೈತರ ಅನುಕೂಲಕ್ಕಾಗಿ ಬಿಎಂಸಿ ಕೇಂದ್ರ ಪ್ರಾರಂಭಿಸಲಾಗಿದ್ದು, ಇದರಿಂದ ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೈನುಗಾರಿಕೆ ಲಾಭದಾಯಕವಾಗಿದ್ದು, ಜೀವನೋಪಾಯ ಮಾರ್ಗವಾಗಿ ಇದನ್ನು ಬಳಸಿಕೊಳ್ಳಬೇಕು ಎಂದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಬಿಂಡಹಳ್ಳಿ ಗ್ರಾಮದಲ್ಲಿ 3 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರ ತೆರೆಯಲಾಗಿದೆ. ನಾನು ನಿರ್ದೇಶಕನಾದ ಮೇಲೆ, ಚಿಕ್ಕಾಡೆ, ಕ್ಯಾತನಹಳ್ಳಿ, ಅರಳಕುಪ್ಪೆ, ಕೋಡಾಲ, ಎರೆಗೌಡನಹಳ್ಳಿ, ಕಡಬ, ನಾರಾಯಣಪುರ, ಚಿನಕುರಳಿ ಸೇರಿದಂತೆ 10 ಬಿಎಂಸಿ ಕೇಂದ್ರಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಗುಣಮಟ್ಟದ ಹಾಲು ಒಕ್ಕೂಟಕ್ಕೆ ಸರಬರಾಜಾಗುತ್ತಿದೆ. ರೈತರಿಗೆ ಅನುಕೂಲವಾಗುವ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಒಕ್ಕೂಟ ಅಭಿವೃದ್ಧಿಯಾಗುತ್ತದೆ. ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಎಚ್.ಎನ್.ಉಷಾ, ಮುಖಂಡರಾದ ಸಿ.ಆರ್.ರಮೇಶ್, ಕೆ.ಕುಬೇರ, ಬಿ.ಕೆ.ಸ್ವಾಮಿ ಇತರರಿದ್ದರು.