ಪಂಚೆ ಕಟ್ಟಿ ನೇಗಿಲು ಹಿಡಿದ ಬಿ.ಸಿ.ಪಾಟೀಲ್

6-klr-4
Published on

ಕೋಲಾರ: ಮುಳಬಾಗಿಲಿನ ಬೇವಹಳ್ಳಿಯ ಅಶ್ವತ್ಥಮ್ಮ ಅವರ ತೋಟದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ವಿವಿಧ ಚಟುವಟಿಕೆಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಡಗರದಂತೆ ಕಂಡುಬಂದವು.

ಬೆಳಗ್ಗೆ 9.15ಕ್ಕೆ ಗ್ರಾಮಕ್ಕೆ ಆಗಮಿಸಿದ ಬಿ.ಸಿ.ಪಾಟೀಲ್‌ಗೆ ಜಿಲ್ಲಾಡಳಿತದಿಂದ ಡಿಸಿ ಸಿ.ಸತ್ಯಭಾಮ ಸ್ವಾಗತ ಕೋರಿದರು. ರೈತ ಮಹಿಳೆ ಅಶ್ವತ್ಥಮ್ಮ-ಮೋಹನ್ ದಂಪತಿಯ ತೋಟದ ಮನೆ ಮುಂಭಾಗದಲ್ಲಿ ರಾಶಿ ಹಾಕಿದ್ದ ರಾಗಿ ಕಣಕ್ಕೆ ದಂಪತಿ ಪೂಜೆ ಸಲ್ಲಿಸುವುದರೊಂದಿಗೆ ದಿನದ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ಸಿಕ್ಕಿತು.

ಸಚಿವ ಬಿ.ಸಿ.ಪಾಟೀಲ್ ಅವರು ರಾಗಿಯನ್ನು ಕಣಜಕ್ಕೆ ತುಂಬುವ ಮೂಲಕ ಈ ವರ್ಷದ ರಾಗಿ ಫಸಲನ್ನು ರೈತ ದಂಪತಿ ಮನೆ ತುಂಬಿಸಿಕೊಂಡರೆ, ಸಾಂಕೇತಿಕವಾಗಿ ಬೇಯಿಸಿದ ಸಿಹಿಗೆಣಸು, ಅವರೆ, ಕಬ್ಬಿನ ರುಚಿ ಸವಿದರು. ರೈತ ದಂಪತಿಯನ್ನು ಸನ್ಮಾನಿಸಲಾಯಿತು.

ವಿವಿಧ ಚಟುವಟಿಕೆ: ಅಶ್ವತ್ಥಮ್ಮ ಅವರ ರೇಷ್ಮೆ ಹುಳು ಸಾಕಾಣಿಕೆ ಮನೆ ವೀಕ್ಷಿಸಿದ ಸಚಿವರು ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪು ಹಾಕಿದರು. ಅಜೋಲಾ ತೊಟ್ಟಿ ವೀಕ್ಷಿಸಿ ಉಪಯುಕ್ತತೆ ಬಗ್ಗೆ ಮಾಹಿತಿ ಪಡೆದರು. ಚಾಪ್ ಕಟ್ಟರ್‌ನಿಂದ ಹುಲ್ಲು ಕತ್ತರಿಸಿ ಹಸುಗಳಿಗೆ ತಿನ್ನಿಸಿದರು. ನಂತರ ಹಾಲು ಕರೆಯುವ ಕಸರತ್ತು ನಡೆಸಿದರೆ ಸಂಸದ ಎಸ್.ಮುನಿಸ್ವಾಮಿ ಕೂಡ ಹಾಲು ಕರೆದು ಸೈ ಎನಿಸಿಕೊಂಡರು.

ತೋಟದಲ್ಲಿನ ಕಾಂಪೋಸ್ಟ್ ತೊಟ್ಟಿಗೆ ವೇಸ್ಟ್ ಡೀ ಕಂಪೋಸರ್ ಸಿಂಪಡಿಸಿದ ಸಚಿವರು ಉಳುಮೆ ಮಾಡಿ ಸಿದ್ಧಪಡಿಸಿದ್ದ ಜಮೀನಿನಲ್ಲಿ ಹಸಿರೆಲೆ ಗೊಬ್ಬರ ಬೀಜ ಬಿತ್ತನೆ, ಅಂಗಾಂಶ ಕೃಷಿ ಆಲೂಗಡ್ಡೆ ಬಿತ್ತನೆ, ಕೊತ್ತಂಬರಿ ಬೀಜ ಬಿತ್ತನೆ, ಟೊಮ್ಯಾಟೊ ಸಸಿ ನಾಟಿ, ಜೀವಾಮೃತ ತಯಾರಿಕೆ ಹಾಗೂ ಕಲ್ಲಂಗಡಿ ಗಿಡಗಳಿಗೆ ಸಿಂಪಡಣೆ, ಸೀಬೆ ಗಿಡದ ಪ್ರೂನಿಂಗ್, ತೊಗರಿ ಫಸಲು ಕಟಾವು, ಸೌತೆಕಾಯಿ ಬೀಜವನ್ನು ಟೊಮ್ಯಾಟೊ ತಾಕಿನಲ್ಲಿ ಬಿತ್ತನೆ ಮಾಡಿದರು.

ರೈತ ಬಯ್ಯಪ್ಪ ಅವರ ತೋಟದಲ್ಲಿ ಟೊಮ್ಯಾಟೊ ತೋಟದಲ್ಲಿ ಬಳ್ಳಿ ಕಟ್ಟಿದ ಸಚಿವರು ಫಸಲಿಗೆ ಬಂದಿದ್ದ ಹಣ್ಣು ಕೊಯ್ಲು ಮಾಡಿದರು. ಗ್ರಾಮದ ಸಮುದಾಯ ಸಸಿ ಮುಡಿಗೆ ಭೇಟಿ ನೀಡಿ ಪರಿಶೀಲಿಸಿ ಐವರು ರೈತರು ಸೇರಿಕೊಂಡು ಮಾಡಿರುವ ನರ್ಸರಿಯ ವಹಿವಾಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಲಿಬಿಲಿಗೊಂಡ ಎತ್ತುಗಳು: ಪೊಲಿಸ್ ಅಧಿಕಾರಿಯಾಗಿ ಕೈಯಲ್ಲಿ ಲಾಠಿ ಹಿಡಿದಿದ್ದ ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿ ತಲೆಗೆ ಹಸಿರು ರುಮಾಲು ಸುತ್ತಿಕೊಂಡು ಪಂಚೆ ಕಟ್ಟಿ ಅಶ್ವತ್ಥಮ್ಮ ಜಮೀನಿನಲ್ಲಿ ನೇಗಿಲು ಹಿಡಿದರು. ಹೊಯ್... ಹೊಯ್ ಎನ್ನುತ್ತಿದ್ದಂತೆ ನೆರೆದಿದ್ದ ಜನರನ್ನು ಕಂಡು ಗಲಿಬಿಲಿಗೊಂಡಿದ್ದ ಜೋಡೆತ್ತುಗಳು ಸರ‌್ರನೆ ಮುಂದಡಿ ಇಟ್ಟವು. ನಂತರ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್,ಮುನಿಸ್ವಾಮಿ ಕೂಡ ಉಳುಮೆಗೆ ಕೈ ಜೋಡಿಸಿದರು.

ರೈತರಿಗೆ ಸ್ಪರ್ಧೆ: ಅಶ್ವತ್ಥಮ್ಮ ಅವರ ಜಮೀನಿನಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ನಾಟಿ ಮಾಡುವ ಸ್ಪರ್ಧೆ ಹಾಗೂ ರೈತ ಮಹಿಳೆಯರಿಗೆ ಟೊಮ್ಯಾಟೊ ನಾರು ನಾಟಿ ಸ್ಪರ್ಧೆ ನಡೆಯಿತು. ಆಲೂಗಡ್ಡೆ ಬಿತ್ತನೆಯಲ್ಲಿ ಭರತ್ ಕುಮಾರ್ (ಪ್ರ), ಸುಬ್ರಮಣಿ (ದ್ವಿ) ಹಾಗೂ ಟೊಮ್ಯಾಟೊ ನಾರು ನಾಟಿಯಲ್ಲಿ ಎಂ. ಸನೇಹ, ಲಾವಣ್ಯ (ಪ್ರ) ದಿವಾಕರ (ದ್ವಿ) ಬಹುಮಾನ ಪಡೆದರು. ಬಯ್ಯಪ್ಪ ಅವರ ಟೊಮ್ಯಾಟೊ ತೋಟದಲ್ಲೂ ಟೊಮ್ಯಾಟೊ ಹಣ್ಣು ಕೊಯ್ಲು ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು.

ಮೆರವಣಿಗೆ: ಎನ್. ವಡ್ಡಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಆಗಮಿಸಿದ ಸಚಿವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ವಿಶೇಷ ಪೂಜೆ ಸಲ್ಲಿಸಿದ ಸಚಿವ ಪಾಟೀಲ್ ಅವರನ್ನು ಬಣ್ಣ ಬಣ್ಣದ ಬಲೂನ್, ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿದ್ದ ಎತ್ತಿನ ಬಂಡಿಯಲ್ಲಿ ಎಪಿಎಂಸಿ ಮಾರುಕಟ್ಟೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಹತ್ತಕ್ಕೂ ಹೆಚ್ಚು ಎತ್ತಿನಬಂಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ನೂರಾರು ರೈತರು ಜತೆಗೆ ಹೆಜ್ಜೆ ಹಾಕಿದರು.

ಮೆರುಗು ತಂಡ ಕಲಾತಂಡ: ಮರಕೋಲು ನಡಿಗೆ, ವೀರಗಾಸೆ ನೃತ್ಯ, ಡೊಳ್ಳು ಕುಣಿತ, ವೇಣು ಕುಣಿತ ಇನ್ನಿತರ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ತಂದವು. ಕರೊನಾ ಅವಧಿಯ ಸರಿಸುಮಾರು 10 ತಿಂಗಳ ನಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ನಡೆದ ಮೆರವಣಿಗೆಯನ್ನು ರಸ್ತೆ ಇಕ್ಕೆಲಗಳಲ್ಲಿ ನೂರಾರು ಮಂದಿ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net