ಬಾಪೂಜಿನಗರ, ಪಾದರಾಯನಪುರದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನವಾಗದ ಸೀಲ್​ಡೌನ್: ಆದರೂ ಮೋರಿಗೆ ಹಾರಿದ ಯುವಕ!

Bapuji_Nagar
Published on

ಬೆಂಗಳೂರು: ನವದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಬೆಂಗಳೂರಿನ ಪಾದರಾಯನ ಪುರ (ವಾರ್ಡ್ ಸಂಖ್ಯೆ 135) ಹಾಗೂ ಬಾಪೂಜಿನಗರವನ್ನು (134) ಸೀಲ್​ಡೌನ್ ಮಾಡಲಾಗಿದೆಯಾದರೂ ಕಟ್ಟುನಿಟ್ಟಿನ ಅನುಷ್ಠಾನ ಕಂಡುಬರಲಿಲ್ಲ.

ಟ್ಯಾಂಕ್ ಬಂಡ್ ರಸ್ತೆಯ ಕಡೆಯಿಂದ ತೆರಳಿದಾಗ ಸಿಗುವ ಚೌಡಪ್ಪ ರಸ್ತೆ, ಪಾದರಾಯನಪುರ ಮುಖ್ಯರಸ್ತೆ, ಹೊಸಹಳ್ಳಿ ರಸ್ತೆಯ ಮೂಲಕ ಪಾದರಾಯನಪುರ ವಾರ್ಡ್ ಹಾದುಹೋಗುತ್ತದೆ. ಎರಡೂ ಬದಿ ಸಂಚಾರ ಇರುವ ರಸ್ತೆಗಳಲ್ಲಿ ಒಂದನ್ನು ಪೊಲೀಸರು ಬಂದ್ ಮಾಡಿದ್ದಾರಾದರೂ ಮತ್ತೊಂದು ರಸ್ತೆಯಲ್ಲಿ ವಿರಳ ವಾಹನ ಸಂಚಾರ ಮುಂದುವರಿದಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಆದರೆ ಅಂಗಡಿಗಳ ಮುಂದಿನ ಖಾಲಿ ಜಾಗಗಳಲ್ಲಿ ಆರೇಳು ಯುವಕರ ಗುಂಪು ನಿಂತು ಮಾತನಾಡುತ್ತಿರುವುದು ಕಂಡು ಬಂದಿತು. ಮುಖ್ಯರಸ್ತೆಗೆ ಹೊಂದಿಕೊಂಡಿರುವ ಅನೇಕ ಸಣ್ಣ ರಸ್ತೆ, ಗಲ್ಲಿಗಳಿಗೆ ಸಿಮೆಂಟ್ ಬ್ಲಾಕ್, ಕಟ್ಟಿಗೆ, ಡ್ರಂ ಗಳನ್ನು ಇಟ್ಟು ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಆ ರಸ್ತೆಗಳಲ್ಲಿ ವಾಸಿಸುವ ಕುಟುಂಬಗಳು ರಸ್ತೆಯಲ್ಲಿ ನಿಂತು ಮಾತನಾಡುವುದು, ಕೆಲವರು ಬ್ಯಾರಿಕೇಡ್​ಗಳನ್ನು ದಾಟಿ ಮುಖ್ಯರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂತು. ವಾರ್ಡ್​ನಲ್ಲೇ ವಾಸಿಸುವ ಯುವಕರ ತಂಡಗಳನ್ನು ಸಿವಿಲ್ ಡಿಫೆನ್ಸ್ ಅಡಿಯಲ್ಲಿ ಪೊಲೀಸರು ನಿಯೋಜಿಸಿದ್ದು, ಕೈನಲ್ಲಿ ಲಾಠಿ ಹಿಡಿದು ಸಂಚರಿಸುತ್ತಿದ್ದರು. ಸುಖಾಸುಮ್ಮನೆ ಸಂಚರಿಸುತ್ತಿರುವವರನ್ನು ಗದರಿಸುತ್ತಿದ್ದರು. ಪದೇಪದೆ ರಸ್ತೆಗೆ ಬರುತ್ತಿದ್ದ ಯುವಕನನ್ನು ಲಾಠಿ ಹಿಡಿದು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಓಡಿಸುತ್ತಿದ್ದ ದೃಶ್ಯ ಕಂಡುಬಂತು.

‘ನಿನ್ನೆವರೆಗೆ ಕೆಲವರು ಸಂಚಾರ ಮಾಡುತ್ತಿದ್ದರು, ಇವತ್ತು ಸಂಪೂರ್ಣ ಸೀಲ್​ಡೌನ್ ಆಗಿರುವುದರಿಂದ ಸಾಕಷ್ಟು ಕಡಿಮೆ ಜನರಿದ್ದಾರೆ. ನಮ್ಮ ಒಳ್ಳೆಯದಕ್ಕೆ ಮಾಡಿರುವ ನಿಯಮವನ್ನು ಪಾಲನೆ ಮಾಡುತ್ತೇವೆ’ ಎಂದು ಸ್ಥಳೀಯ ನಿವಾಸಿ ಅಕ್ಮಲ್ ಪಾಷಾ ತಿಳಿಸಿದರು.

ಬಾಪೂಜಿ ನಗರದಲ್ಲಿ ಸಾಮಾನ್ಯ: ಬಾಪೂಜಿನಗರದಲ್ಲಿ ಇಲ್ಲಿಯವರೆಗೆ ಯಾವುದೇ ಕರೊನಾ ಸೋಂಕಿತರು ಪತ್ತೆಯಾಗಿಲ್ಲವಾದರೂ ಪಾದರಾಯನಪುರಕ್ಕೆ ಹೊಂದಿಕೊಂಡಿರುವ ಕಾರಣಕ್ಕೆ ಇಲ್ಲೂ ಸೀಲ್​ಡೌನ್ ಮಾಡಲಾಗಿದೆ. ಮೈಸೂರು ರಸ್ತೆಯಿಂದ ಬಾಪೂಜಿನಗರಕ್ಕೆ ಪ್ರವೇಶಿಸುವ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಬ್ಬಾಗಿಲನ್ನು ಪೊಲೀಸರು ಬಂದ್ ಮಾಡಿದ್ದಾರೆ. ಮೊದಲ ಮುಖ್ಯರಸ್ತೆಯಲ್ಲಿ ಜನಸಂಖ್ಯೆ ವಿರಳವಾದರೂ 2ನೇ ಮುಖ್ಯರಸ್ತೆಯಲ್ಲಿ ದಿನಸಿ ಅಂಗಡಿ, ಹಾಲಿನ ಬೂತ್​ಗಳು ತೆರೆದಿದ್ದವು. ಸಣ್ಣ ರಸ್ತೆಗಳ ಜತೆಗೆ ಮುಖ್ಯರಸ್ತೆಯಲ್ಲೂ

ಜನರು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮಾತನಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ದಿನಸಿ ಅಂಗಡಿಗಳಲ್ಲಿ ಖರೀದಿಗೆ ನಿಂತ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತ ಗಮನ ಹರಿಸಿರಲಿಲ್ಲ, ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಅನ್ನು ಬಹುತೇಕರು ಲೆಕ್ಕಕ್ಕೆ ಇರಿಸಿಕೊಂಡಿರಲಿಲ್ಲ. ನಿನ್ನೆವರೆಗೆ ರಸ್ತೆಯಲ್ಲಿ ಜನರೇ ಇರುತ್ತಿರಲಿಲ್ಲ. ಬೆಳಗ್ಗೆ ಹಾಗೂ ಸಂಜೆ ಬಂದು ವಸ್ತುಗಳನ್ನು ಖರೀದಿಸಿ ತೆರಳುತ್ತಿದ್ದರು. ಇವತ್ತಿನಿಂದ ಸೀಲ್​ಡೌನ್ ಎಂದು ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ನಾಳೆಯಿಂದ ವಸ್ತು ಸಿಗುವುದಿಲ್ಲ ಎಂಬ ಭಯದಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ ಎಂದು ಹಣ್ಣಿನ ವ್ಯಾಪಾರಿ ಮಹದೇವು ತಿಳಿಸಿದರು.

ಮೋರಿಗೆ ಹಾರಿದ ಯುವಕ: ಬಾಪೂಜಿನಗರ ಮುಖ್ಯದ್ವಾರದಲ್ಲಿ ಆಟೋವೊಂದನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ‘ಆಹಾರ ವಿತರಣೆ ಕಾರ್ಯಕರ್ತ’ ಎಂದು ಆಟೋ ಚಾಲಕ ಖಾಸಗಿ ಗುರುತಿನ ಚೀಟಿ ಹಾಕಿಕೊಂಡಿದ್ದ. ಅದು ಅನಧಿಕೃತ ಎಂದು ಆಟೋ ವಶಪಡಿಸಿಕೊಳ್ಳಲಾಯಿತು. ಅಲ್ಲಿಂದ ಮತ್ತೆ ಹಿಂದಕ್ಕೆ ಓಡಿದ ಯುವಕ ನೇರವಾಗಿ ದೊಡ್ಡ ಮೋರಿಗೆ ಜಿಗಿದ. ನಂತರ ಅಲ್ಲಿ ಹೆಚ್ಚು ಹೊತ್ತು ಇರಲಾಗದೆ ಪೊಲೀಸರ ಬಳಿಗೆ ಆಗಮಿಸಿದ. ಲಾಕ್​ಡೌನ್ ಇದ್ದರೂ ಹೊರಬರುವ ಇಂಥವರು ತಮ್ಮ ಜತೆಗೆ ಬೇರೆಯವರಿಗೂ ತೊಂದರೆ ನೀಡುತ್ತಾರೆ. ಪತ್ರಿಕೆಗಳಲ್ಲಿ ಟಿ.ವಿ.ಗಳಲ್ಲಿ ದಿನನಿತ್ಯ ಎಚ್ಚರಿಕೆ ನೀಡಿದರೂ ಜನರು ಕೇಳುತ್ತಿಲ್ಲ ಎಂದು ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ನಮ್ಮ ವಾರ್ಡ್​ನಲ್ಲಿ ಯಾವ ಪ್ರಕರಣ ದಾಖಲಾಗಿಲ್ಲವಾದರೂ ಏಕೆ ಸೀಲ್​ಡೌನ್ ಮಾಡಿದ್ದಾರೋ ಗೊತ್ತಿಲ್ಲ. ಇದರ ಕುರಿತು ಯಾರೂ ನಮ್ಮ ಸಲಹೆ ಕೇಳಿಲ್ಲ, ಮಾಹಿತಿಯನ್ನೂ ನೀಡಿಲ್ಲ. ಆಹಾರ, ದಿನಸಿ ಸಾಮಗ್ರಿ ಹಂಚಲು ಇದರಿಂದ ಸಮಸ್ಯೆಯಾಗುತ್ತದೆ.

| ಅಜ್ಮಲ್ ಬೇಗ್ ಬಾಪೂಜಿನಗರ ಕಾರ್ಪೇರೇಟರ್

ಲಾಕ್​ಡೌನ್ ತೆರವಾದರೂ ಮುಂದುವರಿಕೆ: ದೇಶಾದ್ಯಂತ ಸದ್ಯ ಜಾರಿಯಲ್ಲಿರುವ 21 ದಿನಗಳ ಲಾಕ್​ಡೌನ್ ಏ.14ಕ್ಕೆ ಮುಕ್ತಾಯವಾಗುತ್ತದೆ. ಅದನ್ನು ಮುಂದುವರಿಸಬೇಕೆ ಬೇಡವೇ ಎಂಬ ತೀರ್ವನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಲಿವೆ. ಆದರೆ, ಲಾಕ್​ಡೌನ್ ದೇಶಾದ್ಯಂತ ತೆರವಾದರೂ ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಸೀಲ್​ಡೌನ್ ಮುಂದುವರಿಯಲಿದೆ. ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ನಿರ್ದಿಷ್ಟ ಪ್ರದೇಶದಲ್ಲಿ 2 ಪ್ರಕರಣ ಬೆಳಕಿಗೆ ಬಂದರೆ ಸೀಲ್​ಡೌನ್ ಮಾಡುತ್ತೇವೆ. ಮುಂದೆಯೂ ಈ ಮಾನದಂಡದಲ್ಲಿ ಅಗತ್ಯಬಿದ್ದರೆ ಮತ್ತಷ್ಟು ವಾರ್ಡ್​ಗಳಲ್ಲಿ ಜಾರಿ ಮಾಡಬಹುದು. ಸೀಲ್​ಡೌನ್ 7-14 ದಿನ ಇರಬೇಕು ಎಂದು ವಿಶ್ವಸಂಸ್ಥೆ ಮಾರ್ಗಸೂಚಿಯಲ್ಲಿದ್ದರೂ ಅದು ಕಾನೂನಲ್ಲ. ಸ್ಥಳೀಯ ವೈದ್ಯಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ ಅವಧಿಯನ್ನು ಕಡಿತ ಮಾಡುವ ಹಾಗೂ ವಿಸ್ತರಿಸುವ ನಿರ್ಧಾರ ಮಾಡಬಹುದು. ರಾಜ್ಯದ ಇತರೆಡೆ ಲಾಕ್​ಡೌನ್ ತೆರವಾದರೂ ಈ ವಾರ್ಡ್​ಗಳಲ್ಲಿ ಸೀಲ್​ಡೌನ್ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಸಂರ್ಪತರ ಪತ್ತೆ: ಸೋಂಕಿತರ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕ ಹೊಂದಿರುವವರ ಪತ್ತೆ ಕಾರ್ಯ ನಡೆಯುತ್ತಿದೆ. ಸೋಂಕಿತರ ಕುಟುಂಬ ಮತ್ತು ಪಕ್ಕದ ಮನೆಗಳ ಕುಟುಂಬಗಳ ಸದಸ್ಯರಿಗೆ ಸೀಲ್ ಹಾಕಿ ಪ್ರತ್ಯೇಕವಾಗಿ ಹೋಟೆಲ್​ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ. ಪಾದರಾಯನಪುರ ಹಾಗೂ ಬಾಪೂಜಿನಗರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಪ್ರತಿಯೊಂದು ಮನೆಗಳ ತಪಾಸಣೆ ಮತ್ತು ಸಮೀಕ್ಷೆಗೆ 60 ತಂಡಗಳನ್ನು ನಿಯೋಜಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ, ಸ್ಥಳೀಯ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದಾರೆ. ಕರೋನಾ ಸೋಂಕಿನ ಲಕ್ಷಣ ಕಂಡು ಬಂದವರನ್ನು ಹೆಚ್ಚಿನ ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗುವುದು. 2ನೇ ಹಂತದಲ್ಲಿ ರ್ಯಾಪಿಡ್ ಪದ್ಧತಿಯಲ್ಲಿ ಕರೋನಾ ಸೋಂಕಿನ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಪಾದರಾಯನಪುರದಲ್ಲಿ ಹೆಚ್ಚು ಪೌರಕಾರ್ವಿುಕರು: ಪಾದರಾಯನಪುರ ಕಾಲನಿಯಲ್ಲಿ ಹೆಚ್ಚು ಪೌರ ಕಾರ್ವಿುಕರ ಕುಟುಂಬಗಳು ನೆಲೆಸಿವೆ. ಹಾಗಾಗಿ ಸೀಲ್​ಡೌನ್ ವೇಳೆ ಇಲ್ಲಿನ ಪೌರ ಕಾರ್ವಿುಕರು ಕೂಡ ಮನೆಯಿಂದ ಹೊರಬರುವಂತಿಲ್ಲ. ಈ ವಾರ್ಡ್ ಗಳಲ್ಲಿ ನೆಲೆಸಿರುವ ಪೌರಕಾರ್ವಿುಕರು ಎಷ್ಟಿದ್ದಾರೆ ಎಂಬುದನ್ನು ಗಮನಿಸಿ, ಅವರ ಬದಲು ಬೇರೆಯವರನ್ನು ನಿಯೋಜಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಪಾಲಿಕೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ಕಸ ಸಂಗ್ರಹಕ್ಕೆ ಪ್ರತಿ ಮನೆಗೂ ಗಾಡಿಗಳನ್ನು ರವಾನಿಸಬೇಕು ಎಂದು ತೀರ್ವನಿಸಲಾಗಿದೆ. ಬಹುತೇಕರ ಮನೆಗಳಿಗೆ ಅಗತ್ಯ ದಿನಸಿ ಸರಬರಾಜು ಮಾಡಲಾಗಿದೆ. 7 ಸಾವಿರ ಕುಟುಂಬಗಳಿಗೆ 21 ದಿನಕ್ಕೆ ಆಗುವಷ್ಟು ದಿನಸಿಯನ್ನು ವೈಯಕ್ತಿಕವಾಗಿ ನೀಡಿದ್ದೇವೆ. ಸೀಲ್​ಡೌನ್ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ.

| ಇಮ್ರಾನ್ ಪಾಷಾ ಪಾದರಾಯನಪುರ ಕಾಪೋರೇಟರ್

ರಮೇಶ ದೊಡ್ಡಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net