ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ಮನೆ ಮಾಡಿದ ವ್ಯಕ್ತಿಯ ಅನುಭವ ಕೇಳಿದ್ರೆ ನಿಮಗೂ ಆಸೆ ಬರಬಹುದು!

Tree House
Published on

ಲಖನೌ: ಕರೊನಾ ವೈರಸ್​ಗೆ ಗೇಟ್​ ಪಾಸ್​ ನೀಡಲು ಸಾಮಾಜಿಕ ಅಂತರವೇ ಮದ್ದು ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಮರದಲ್ಲೇ ಮನೆ ನಿರ್ಮಿಸಿ ಜನರಿಂದ ಭಾರಿ ಅಂತರ ಕಾಯ್ದುಕೊಂಡ ಅಪರೂಪದ ಪ್ರಕರಣ ವರದಿಯಾಗಿದೆ.

ಹಪೂರ್​ ಜಿಲ್ಲೆಯ ಅಸೊಧಾ ಗ್ರಾಮದ ನಿವಾಸಿ ಮುಕಲ್​ ತ್ಯಾಗಿ ಎಂಬುವರು ಮರದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹಳೆಯ ಹಾಗೂ ಒಣಗಿದ ಮರಗಳ ತುಂಡಗಳನ್ನು ಸಾಲಾಗಿ ಜೋಡಿಸಿ ಹಗ್ಗದ ಸಹಾಯದಿಂದ ಕಟ್ಟಿ ಸರಳವಾದ ಆಶ್ರಯ ತಾಣವನ್ನು ಮರದಲ್ಲೇ ಸೃಷ್ಟಿಸಿದ್ದಾರೆ.

ಮಹಾಮಾರಿ ಕರೊನಾ ಹರಡುವುದನ್ನು ತಡೆಯಲು ಅವಶ್ಯವಾಗಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇರುವುದೊಂದೆ ದಾರಿ, ಹೀಗಾಗಿ ನನ್ನ ಮಗನ ಸಹಾಯಾದಿಂದ ಮರಗಳನ್ನು ಕತ್ತರಿಸಿ ಅದರಿಂದ ಮರದ ಮೇಲೆ ಪುಟ್ಟ ಆಶ್ರಯ ತಾಣ ನಿರ್ಮಿಸಿದ್ದೇವೆ ಎಂದು ತ್ಯಾಗಿ ಹೇಳಿದ್ದಾರೆ.

ಮರದ ಮನೆಯಲ್ಲಿ ವಾಸಿಸುತ್ತಿರುವುದರಿಂದ ನಾವು ಪ್ರಕೃತಿಗೆ ಇನ್ನಷ್ಟು ಹತ್ತಿರವಾಗಿದ್ದೇವೆ ಎಂಬ ಭಾವನೆ ಮೂಡುತ್ತಿದೆ. ಅಲ್ಲದೆ, ಪರಿಸರವು ಕೂಡ ತುಂಬಾ ಶುದ್ಧವಾಗಿದೆ. ಈ ಅನುಭವವನ್ನು ನಾವು ಎಂಜಾಯ್​ ಮಾಡುತ್ತಿದ್ದೇವೆ. ನಮಗೆ ಮನೆಯಿಂದಲೇ ಊಟ ಬರುತ್ತದೆ ಎಂಬುದು ಮುಕುಲ್​ ತ್ಯಾಗಿ ಪುತ್ರನ ಮಾತಾಗಿದೆ.

ಉತ್ತರ ಪ್ರದೇಶದಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಒಟ್ಟಾರೆ ಭಾರತದಲ್ಲಿ ಕರೊನಾ ಪ್ರಕರಣಗಳು 6 ಸಾವಿರ ಸಮೀಪಿಸುತ್ತಿದೆ. ಸಾವಿನ ಸಂಖ್ಯೆಯು ಸಹ 200 ಹತ್ತಿರವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net