

ಬೆಂಗಳೂರು: ಕರ್ತವ್ಯ ನಿರ್ಲಕ್ಷ್ಯ, ಲಂಚಕ್ಕೆ ಬೇಡಿಕೆ ಇಟ್ಟದ್ದಾಗಿ ದೂರು ಸೇರಿ ವಿವಿಧ ಕಾರಣಗಳಿಂದ ಬಿಬಿಎಂಪಿ ದಕ್ಷಿಣ ವಲಯದ ಆಹಾರ ಸುರಕ್ಷತಾಧಿಕಾರಿ ಎಚ್. ಸುರೇಶ್ ಅವರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಕೆ. ನದೀಮ್ ಆಹ್ಮದ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಆ. 3ರಂದು ಮಲ್ಲೇಶ್ವರದ ಮಂತ್ರಿಮಾಲ್‌ನಲ್ಲಿರುವ ಹೋಟೆಲ್‌ಗಳು, ಸೂಪರ್ ಮಾರುಕಟ್ಟೆಗಳು ಹಾಗೂ ಐಸ್‌ಕ್ರೀಂ ಪಾರ್ಲರ್‌ಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಎರಡು ವಿಧದ ಮೊಟ್ಟೆಗಳು ಕಂಡುಬಂದಿದ್ದವು.
ಈ ಮೊಟ್ಟೆಗಳು ಹೊಂಗಸಂದ್ರದ ಕಂಪನಿಯೊಂದರಿಂದ ಪೂರೈಕೆಯಾಗಿದ್ದು, ಸ್ಥಳ ಪರಿಶೀಲಿಸಿ ಮೊಟ್ಟೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸುರೇಶ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಈವರೆಗೂ ವರದಿ ನೀಡಿಲ್ಲ. ಆರು ತಿಂಗಳ ಮಾಸಿಕ ವರದಿಯನ್ನೂ ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ.
ಆಹಾರ ಉದ್ಯಮಗಳಿಗೆ ಭೇಟಿ ನೀಡಿ, ತಪಾಸಣೆ ಮಾಡುವ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಆಹಾರ ಉದ್ದಿಮೆದಾರರಿಂದ ಸುರೇಶ್ ವಿರುದ್ಧ ದೂರುಗಳಿವೆ. ಸಾರ್ವಜನಿಕರಿಂದ ಸ್ವೀಕೃತಗೊಂಡ ದೂರುಗಳ ಬಗ್ಗೆಯೂ ಅವರು ಪರಿಶೀಲಿಸಿ, ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ರೀತಿ ಕರ್ತವ್ಯದ ನಿರ್ಲಕ್ಷ್ಯತೆ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಇಲಾಖೆ ವಿಚಾರಣೆ ಬಾಕಿ ಇರಿಸಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.