

ಬೆಂಗಳೂರು: ಈ ಬಾರಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
2025ನೇ ಸಾಲಿನ ಗಣರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ತ ಶನಿವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅತಿ ಗಣ್ಯರು, ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಯಾವ ದ್ವಾರದಲ್ಲಿ ಬರಬೇಕು ಹಾಗೂ ವಾಹನಗಳ ನಿಲುಗಡೆ ವಿಚಾರದಲ್ಲಿ ಯಾವುದೇ ಲೋಪವಾಗಬಾರದು. ಶೌಚಗೃಹ, ಅಗ್ನಿಶಾಮಕ, ಅಸನ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಸರಿಯಾಗಿ ಇರಬೇಕು. ಶಿಷ್ಟಾಚಾರ ಅನ್ವಯ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾಂಸತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್, ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತ ಮಂಜುನಾಥಸ್ವಾಮಿ, ಪೊಲೀಸ್, ಲೋಕೋಪಯೋಗಿ, ಬೆಸ್ಕಾಂ, ಜಲಮಂಡಳಿ, ಕನ್ನಡ ಮತ್ತು ಸಂಸತಿ ಇಲಾಖೆ ಅಧಿಕಾರಿಗಳಿದ್ದರು.