

ಬೆಂಗಳೂರು: ರಾಜಧಾನಿಯಲ್ಲಿ ವಾಹನ ನಿಲುಗಡೆ ಸಮಸ್ಯೆಗಳ ನಿವಾರಣೆಗೆ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲು ಕೋಟ್ಯಂತರ ರೂ, ಖರ್ಚು ಮಾಡುತ್ತಿರುವ ಬಿಬಿಎಂಪಿ, ಈಗ ಜೆ.ಸಿ. ರಸ್ತೆಯಲ್ಲಿರುವ ಪಾರ್ಕಿಂಗ್ ಕಟ್ಟಡವನ್ನು ಖಾಸಗಿ ಕಾರು ಮಾರಾಟ ಸಂಸ್ಥೆಗೆ ಗುತ್ತಿಗೆ ನೀಡಲು ಮುಂದಾಗಿದೆ.
ನಗರದಲ್ಲಿ 1.4 ಕೋಟಿ ವಾಹನಗಳಿವೆ ಎಂಬ ಅಂದಾಜಿದೆ. ಇಷ್ಟೊಂದು ವಾಹನಗಳ ಪೈಕಿ ಶೇ.80ಕ್ಕೂ ಅಧಿಕ ವಾಹನಗಳಿಗೆ ನಿಲುಗಡೆ ಸ್ಥಳವಿಲ್ಲ. ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಕೆರೆಯಂಗಳ, ಖಾಲಿ ನಿವೇಶನಗಳಲ್ಲಿ ನಿಲ್ಲಿಸಲಾಗುತ್ತಿದೆ. ಜತೆಗೆ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು, ಪ್ರಮುಖ ರಸ್ತೆಗಳಿರುವ ಕಡೆಗಳಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲದೆ ಜನರು ರಸ್ತೆಯಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಹೀಗಾಗಿ ಸಂಚಾರದಟ್ಟಣೆ ಉಂಟಾಗುತ್ತಿದ್ದು, ಇದನ್ನು ತಡೆಯಲು ಪಾಲಿಕೆಯಿಂದ ಬಹುಮಹಡಿ ವಾಹನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಪಾಲಿಕೆಯ ದಕ್ಷಿಣ ವಲಯದ ಅಧಿಕಾರಿಗಳು ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದ ಒಂದು ಮಹಡಿಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿದೆ.
ಬಹುಮಹಡಿ ವಾಹನ ನಿಲುಗಡೆಯಲ್ಲಿನ ನೆಲ ಮಹಡಿ ಒಳಗೊಂಡು 4 ಮಹಡಿಗಳಲ್ಲಿ 800 ದ್ವಿಚಕ್ರ ವಾಹನ ಮತ್ತು 400 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಈಗ ನೆಲ ಹಾಗೂ ಮೊದಲ ಮಹಡಿಗಳಲ್ಲಿ ಮಾತ್ರ ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶ ನೀಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಉಳಿದಂತೆ 2 ಮತ್ತು 3ನೇ ಮಹಡಿಗಳನ್ನು ಖಾಸಗಿ ಸಂಸ್ಥೆಗೆ ನೀಡಲಾಗುತ್ತಿದೆ. ಈಗಾಗಲೆ ಮೇಲಿನ ಎರಡು ಮಹಡಿಗಳಲ್ಲಿ ಕಾರು ನಿರ್ಮಾಣ ಸಂಸ್ಥೆಯು, ತಮ್ಮ ಕಂಪನಿಗಳ ಕಾರುಗಳ ದುರಸ್ತಿಗೆ ಬೇಕಾದ ಯಂತ್ರಗಳನ್ನು ಅಳವಡಿಸಿಕೊಂಡಿದೆ. ಜತೆಗೆ, ಸಾರ್ವಜನಿಕರು ಮತ್ತು ಅವರ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಭದ್ರತಾ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಒಟ್ಟು 30 ವರ್ಷದವರೆಗೆ ಕಡಿಮೆ ದರದಲ್ಲಿ ಗುತ್ತಿಗೆಗೆ ನೀಡಲು ಮುಂದಾಗಿದ್ದು, ಈ ಬಗ್ಗೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ.
ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವುದಕ್ಕಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತಿ ಸೋಮವಾರ ಬಿಬಿಎಂಪಿ, ಪೊಲೀಸ್ ಇಲಾಖೆ ಸೇರಿ ಎಂಟಕ್ಕೂ ಅಧಿಕ ಇಲಾಖೆಗಳ ಸಭೆ ಕರೆದು ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಈ ವೇಳೆ ರಸ್ತೆಗಳಲ್ಲಿ ವಾಹನ ನಿಲುಗಡೆ ತಗ್ಗಿಸಲು ಹೆಚ್ಚಾಗಿ ಬಹುಮಹಡಿ ಕಟ್ಟಡ ನಿರ್ಮಿಸುವಂತೆ ಪಾಲಿಕೆಗೆ ಸರ್ಕಾರದಿಂದ ಸಲಹೆ ನೀಡಲಾಗಿದೆ. ಟ್ರಾಫಿಕ್ ನಿಯಂತ್ರಣ ಉದ್ದೇಶವನ್ನೇ ಮರೆತಿರುವ ವಲಯ ಮಟ್ಟದ ಅಧಿಕಾರಿಗಳು ಖಾಸಗಿ ಸಂಸ್ಥೆ ನೀಡುವ ಹಣಕ್ಕಾಗಿ ಪಾಲಿಕೆಯ ಆದಾಯಕ್ಕೆ ಕೊಡಲಿ ಹಾಕಲು ಮುಂದಾಗಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಕಟ್ಟಡವನ್ನು ಖಾಸಗಿಯವರಿಗೆ ನೀಡುವುದಕ್ಕೆ ಸಾರ್ವಜನಿಕ ವಲಯದಿಂದ ಭಾರಿ ವಿರೋಧ ವ್ಯಕ್ತವಾಗಿದೆ.