

ಬೆಂಗಳೂರು: ಕಂಟೈನ್ಮೆಂಟ್ ಮತ್ತು ಸೀಲ್ಡೌನ್ ಮಾಡದ ಸ್ಥಳಗಳಲ್ಲಿ ಎಲೆಕ್ಟ್ರಿಕಲ್, ಟೇಲರಿಂಗ್ ಅಂಗಡಿಗಳನ್ನು ತೆರೆಯಬಹುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ತಿಳಿಸಿದ್ದಾರೆ.
ಲಾಕ್ಡೌನ್ನಿಂದ ಬಹುತೇಕ ವ್ಯಾಪಾರ ವಹಿವಾಟು ನಿಲ್ಲಿಸಲಾಗಿತ್ತು. ಏ.20ರಿಂದ ಕೇಂದ್ರ ಸರ್ಕಾರ ಸೋಂಕು ಇಲ್ಲದ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯ ಆಗುವಂತೆ ಕೆಲವು ಸಡಿಲಿಕೆ ನೀಡಿದೆ. ಸಾಮಾನ್ಯ ವಾರ್ಡ್ಗಳಲ್ಲಿ ಎಲೆಕ್ಟ್ರಿಕಲ್, ಟೇಲರಿಂಗ್ ಮತ್ತು ವಿದ್ಯುತ್ ಉಪಕರಣ ದುರಸ್ತಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಗುತ್ತಿಗೆ ಸಂಸ್ಥೆ, ಮಾಲೀಕರು ತಮ್ಮ ಬಳಿಯಿರುವ ಕಾರ್ವಿುಕರಿಂದ ಕೆಲಸ ಮಾಡಿಸಬಹುದು. ಅಲ್ಲದೆ, ಪಾಸ್ ಪಡೆದುಕೊಂಡು ಕಾರ್ವಿುಕರು ವಾಸವಿರುವ ಸ್ಥಳದಿಂದ ನಿರ್ಮಾಣ ಸ್ಥಳಕ್ಕೆ ಕರೆದುಕೊಂಡು ಹೋಗಿ ಕೆಲಸ ಮಾಡಿಸಬಹುದು. ಸ್ವಚ್ಛತೆ, ಸಾಮಾಜಿಕ ಅಂತರ ಮತ್ತು ಸೋಂಕು ಲಕ್ಷಣ ಕಂಡುಬಂದ ಕಾರ್ವಿುಕರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.