ವ್ಯಾಪಾರಿಗಳಿಗೆ ಹಾಗೂ ಜನರಿಗೆ ಗುಡ್​ ನ್ಯೂಸ್​ ಕೊಟ್ಟ ಬಿಬಿಎಂಪಿ! ಈ ಪ್ರಕಟಣೆ ನಿಮ್ಮ ಗಮನಕ್ಕೆ

ವಿಜಯವಾಣಿ-2024-08-06T200705.940
Published on

ಬೆಂಗಳೂರು: 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 269ರಲ್ಲಿ ಘೋಷಿಸಿರುವಂತೆ ಇದೀಗ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ-ವಹಿವಾಟು ನಡೆಸುವವರು ಇನ್ಮುಂದೆ ಮಧ್ಯರಾತ್ರಿ 1 ಗಂಟೆಯವರೆಗೆ ಅಂಗಡಿಗಳನ್ನು ತೆರೆದಿರಬಹುದು ಎಂದು ಬಿಬಿಎಂಪಿ ಹೊರಡಿಸಿದ ಹೊಸ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ರಾಜ್ಯ ರಾಜಧಾನಿಯಲ್ಲಿ ರಸ್ತೆಬದಿ ವ್ಯಾಪಾರ-ವಹಿವಾಟು ನಡೆಸುವವರು ರಾತ್ರಿ 11 ಗಂಟೆಯೊಳಗೆ ತಮ್ಮ ವ್ಯಾಪಾರವನ್ನು ಮುಗಿಸಿ, ಅಂಗಡಿಗಳನ್ನು ಮುಚ್ಚಬೇಕಿತ್ತು. ಆದ್ರೆ, ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಹೊಸ ಪ್ರಕಟಣೆಯೊಂದನ್ನು ವ್ಯಾಪಾರಿಗಳ ಗಮನಕ್ಕೆ ತಂದಿದ್ದು, ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ನಿರ್ಬಂಧವನ್ನು ಬೆಳಗಿನ ಜಾವ 01.00 ಗಂಟೆಯವರೆಗೆ ವಿಸ್ತರಿಸಿದೆ.

"ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ -ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ ಒಂದು ಗಂಟೆಯವರೆಗೆ ಇದೀಗ ವಿಸ್ತರಿಸಲಾಗುವುದು” ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ-ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 06.00 ಗಂಟೆಯಿಂದ ಮಾರನೇ ದಿನ ಮುಂಜಾನೆ 01.00 ಗಂಟೆಯವರೆಗೆ ತೆರೆದಿರಬಹುದು ಎಂದು ಆದೇಶಿಸಲಾಗಿದೆ.

ಇದರೊಟ್ಟಿಗೆ ಲೈಸೆನ್ಸ್ ಪಡೆದ ಬಾರ್‌ ಅಂಡ್​ ರೆಸ್ಟೋರೆಂಟ್, ಹೋಟೆಲ್‌ಗಳು, ಇತ್ಯಾದಿಗಳು ತೆರೆದಿರುವ ಅವಧಿಯಲ್ಲಿ ನಿಗದಿಪಡಿಸಲು ಅಧಿಕಾರವಿರುತ್ತದೆ. ಬೆಳಗ್ಗೆ 9 ಗಂಟೆಯಿಂದ ಮಾರನೇ ದಿನ 1:00 AM ಗಂಟೆಯವರೆಗೆ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಸದ್ಯ ಈ ಸುದ್ದಿಯನ್ನು ತಿಳಿದ ತಿಂಡಿ ಹಾಗೂ ಮದ್ಯ ಪ್ರಿಯರಿಗೆ ಭಾರೀ ಸಂತಸ ಉಂಟಾಗಿದ್ದು, ಇನ್ಮುಂದೆ ಮಧ್ಯರಾತ್ರಿ ಒಂದು ಗಂಟೆಯವರೆಗೆ ತಾವು ಬಯಸಿದ್ದು ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net