

ಸೋಮವಾರಪೇಟೆ: ಎರಡು ಶತಮಾನಗಳ ಇತಿಹಾಸವಿರುವ ಬಸವನಕೊಪ್ಪ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಕೃಷಿಕರ ಶ್ರದ್ಧಾಕೇಂದ್ರವಾಗಿದ್ದು, ದೇವರ ಆಶೀರ್ವಾದದಿಂದಲೇ ಮಳೆ, ಬೆಳೆಯಾಗುತ್ತಿದೆ ಎಂಬ ನಂಬಿಕೆ ಕೃಷಿಕರಿಗಿದೆ.
ಗ್ರಾಮ ಸಮೃದ್ಧಿಯಾಗಿದೆ. ಪ್ರತಿವರ್ಷ ಉತ್ತಮ ಮಳೆ, ಬೆಳೆಯಾಗುತ್ತಿದೆ. ಕಾಫಿ, ಕಾಳುಮೆಣಸು ರೈತರ ಕೈಹಿಡಿದಿದೆ. ಗ್ರಾಮದಲ್ಲಿ ದೊಡ್ಡ ಮನೆಗಳು ನಿರ್ಮಾಣವಾಗಿವೆ. ವಾಹನಗಳನ್ನು ಖರೀದಿ ಮಾಡಿದ್ದಾರೆ. ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುತ್ತಿದೆ. ಇದೆಲ್ಲಾ ಶ್ರೀ ಬಸವೇಶ್ವರ ದೇವರ ಆಶೀರ್ವಾದ ಎಂದು ಗ್ರಾಮಸ್ಥರು ಹೇಳಿದರು.
ಪ್ರಾರಂಭದಲ್ಲಿ ಅರಳಿಮರದ ಬುಡದಲ್ಲಿ ದೇವರ ಪೂಜೆ ನಡೆಯುತ್ತಿತ್ತು. ನಂತರ ಹೆಂಚಿನ ಮನೆಯಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. 14 ವರ್ಷಗಳ ನಂತರ 15ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಗಿದೆ.
ಕಷ್ಟದ ದಿನಗಳಲ್ಲಿ ದೇವಾಲಯಕ್ಕೆ ಬಂದು ಕೈಮುಗಿದು ತಮ್ಮ ಸಂಕಷ್ಟ ಹೇಳಿಕೊಂಡರೆ ಎಲ್ಲವೂ ಪರಿಹಾರವಾಗುತ್ತದೆ. ಬಸವೇಶ್ವರ ಸ್ವಾಮಿ ಮದುವೆ, ಮಕ್ಕಳ ಭಾಗ್ಯ ಕರುಣಿಸುತ್ತಾನೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ. ಕಾಲಕ್ಕೆ ಸರಿಯಾಗಿ ಮಳೆ ಬೀಳುವುದು, ಉತ್ತಮ ಕೃಷಿ ಫಸಲು ಕೈಸೇರುವುದು ದೇವರ ಅಗೋಚರ ಶಕ್ತಿಯಿಂದ ಎಂಬ ನಂಬಿಕೆಯಿದೆ.
ಗ್ರಾಮದಲ್ಲಿ 25 ಕುಟುಂಬಗಳಿದ್ದು ಕೃಷಿಕರಾಗಿದ್ದಾರೆ. ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೂ ದೇವರ ಸನ್ನಿದಿಯಲ್ಲಿ ಪೂಜೆ ನಡೆಸಿ, ಆಶೀರ್ವಾದ ಪಡೆದ ನಂತರವೇ ಶುಭಕಾರ್ಯ ಮಾಡುತ್ತಾರೆ. ವಧು, ವರರ ಅನ್ವೇಷಣೆಯಲ್ಲೂ ದೇವರು ಪ್ರಸಾದ ನೀಡಬೇಕು. ದನಕರುಗಳಿಗೆ ರೋಗಬಾಧೆ ಬರದಂತೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿವರ್ಷ ಗದ್ದಲಿಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭ ಹರಕೆಗಳನ್ನು ತೀರಿಸಲಾಗುತ್ತದೆ. 101 ಕಾಯಿ ಒಡೆಯುವುದು ದೇವರಿಗೆ ಇಷ್ಟವಾದ ಹರಕೆ. ತಮ್ಮ ಇಷ್ಟಾರ್ಥಗಳು ನೆರವೇರಿದ ನಂತರ ಕೈಲಾದಷ್ಟು ನೀಡಿದರೆ ಸಾಕು. ಬೇರೆ ಜಿಲ್ಲೆಯ ವ್ಯಕ್ತಿಯೊಬ್ಬರು ಕೋರ್ಟ್ ಪ್ರಕರಣದಲ್ಲಿ ಗೆಲುವಿಗಾಗಿ ಹರಕೆ ಹೊತ್ತಿದ್ದರು. ನ್ಯಾಯಾಲಯದಲ್ಲಿ ಗೆಲವಿನ ನಂತರ ದೇವರಿಗೆ 5 ಸಾವಿರ ರೂ.ಗಳನ್ನು ದೇವಾಲಯಕ್ಕೆ ನೀಡಿದ್ದರು ಎಂದು ಗ್ರಾಮದ ಹಿರಿಯರು ಹೇಳಿದರು. ಕಾರ್ತಿಕ ಮಾಸ ಪೂಜೆ, ಶಿವರಾತ್ರಿ ಪೂಜೆ ನಡೆಯುತ್ತದೆ.
ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಹೂಮಳೆ ಸುರಿದರೆ ಮಾತ್ರ ಕಾಫಿ ಫಸಲು ಸಾಧ್ಯ. ಮಳೆ ವಿಳಂಬವಾದರೆ ಬರಗಾಲ ಎಂದೇ ಅರ್ಥ. ಪ್ರಸಕ್ತ ವರ್ಷವೂ ಹೂಮಳೆ ವಿಳಂಬವಾಗಿತ್ತು. ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮಳೆಯಾಗಿದೆ ಎಂದು ಗ್ರಾಮದ ಹಿರಿಯರಾದ ಮಂಜುನಾಥ್ ಹೇಳಿದರು.
ಐದು ದಶಕಗಳ ಹಿಂದೆ ಅತಿವೃಷ್ಟಿಯಾದರೂ, ಅನಾವೃಷ್ಟಿಯಾದರೂ, ಗ್ರಾಮದಲ್ಲಿ ಮಾರಕ ರೋಗ ಬಾಧಿಸಿದರೂ ರೈತರು ಬಸವೇಶ್ವರ ಸ್ವಾಮಿಯ ಮೊರೆ ಹೋಗುತ್ತಿದ್ದರು. ಅಲ್ಲಿಂದ ಇಲ್ಲಿಯವೆರಗೂ ದೇವರ ಆಶೀರ್ವಾದದಿಂದಲೇ ನಮ್ಮೆಲ್ಲರ ಅಕಾಂಕ್ಷೆಗಳು, ಕನಸುಗಳು ನೆರವೇರಿವೆ ಎಂದು ಗ್ರಾಮಸ್ಥ ಬಿ.ಎಂ.ಸುರೇಶ್ ಹೇಳಿದರು.