

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ದೆಹಲಿಯ ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವರು.
ಧಾರವಾಡ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಿಂದ, ಮಾಜಿ ಸಿಎಂ ಬಿಎಸ್ವೈ ಬೆಂಗಳೂರಿನಿಂದ ಸೋಮವಾರ ದೆಹಲಿಗೆ ತೆರಳುವರು. ಎರಡು ದಿನಗಳ ಸಭೆಯಲ್ಲಿ ಪಾಲ್ಗೊಂಡ ನಂತರ ಇಬ್ಬರೂ ಪ್ರತ್ಯೇಕವಾಗಿ ವಿಮಾನದಲ್ಲಿ ಬೆಂಗಳೂರಿಗೆ ಮರಳಲಿದ್ದಾರೆ.
ಈ ವರ್ಷ ಕರ್ನಾಟಕ ಸೇರಿ ಒಂಭತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೊದಲಿಗೆ ಕರ್ನಾಟಕದ ಸರತಿ ಶುರುವಾಗಲಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಈ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ರಣತಂತ್ರದ ಭಾಗವಾಗಿ ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಸರ್ಕಾರದ ಸಾಧನೆ ತಿಳಿಸುವ ಜನಸಂಕಲ್ಪ ಯಾತ್ರೆ ಸಾಧನೆ, ಫಲ, ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ಪರಿಣಾಮಕಾರಿಯಾಗಿ ಬಿಂಬಿಸಲು ಮಾಡಿದ ಪ್ರಯತ್ನ, ಸಂಘಟನೆ ಬಲವರ್ಧನೆ ಚಟುವಟಿಕೆಗಳ ಪ್ರಗತಿ ಪರಾಮರ್ಶೆಯಾಗಲಿದೆ. ರಾಜ್ಯಕ್ಕೆ ಪ್ರತ್ಯೇಕವಾಗಿ ಹೆಣೆಯಬೇಕಾದ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದವರೇ ಆದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಸಭೆಯಲ್ಲಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಸಚಿವ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಖಾಲಿಯಿರುವ ಆರು ಸ್ಥಾನಗಳ ಭರ್ತಿ, ಅವಧಿ ಮುಗಿದ ನಿಗಮ-ಮಂಡಳಿಗಳಿಗೆ ಹೊಸಬರ ನೇಮಕದ ಬಗ್ಗೆ ವರಿಷ್ಠರ ಬಳಿ ಸಿಎಂ ಬೊಮ್ಮಾಯಿ ಪ್ರಸ್ತಾಪಿಸುವ ಸಾಧ್ಯತೆಗಳಿದ್ದು, ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ದಿನಗಳ ಸಭೆ ಸ್ಥೂಲವಾಗಿ ಪರಾಮರ್ಶೆ ಮಾಡಲಿದೆ ಎಂದು ತಿಳಿದಿದೆ.