21ರಂದು ನಗರಕ್ಕೆ ಬಸವಣ್ಣನ ಸ್ತಬ್ಧಚಿತ್ರ ಆಗಮನ

21ರಂದು ನಗರಕ್ಕೆ ಬಸವಣ್ಣನ ಸ್ತಬ್ಧಚಿತ್ರ ಆಗಮನ
Published on

ಹಾಸನ: ವಿಶ್ವಗುರು ಬಸವಣ್ಣ ಅವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕನೆಂದು ಘೋಷಿಸಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದು, ಸೆ.21ರಂದು ನಗರಕ್ಕೆ ಬಸವಣ್ಣ ಅವರ ಸ್ತಬ್ಧಚಿತ್ರ ಆಗಮಿಸಲಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಹೇಳಿದರು.

ನಗರದ ತಣ್ಣೀರುಹಳ್ಳ ಮಠದಲ್ಲಿ ಮಂಗಳವಾರ ನಡೆದ ಬಸವ ಸಂಸ್ಕೃತಿ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೆ.21 ರಂದು ಚಿಕ್ಕಮಗಳೂರಿನಿಂದ ಆಗಮಿಸುವ ಸ್ತಬ್ಧಚಿತ್ರಕ್ಕೆ ಬೇಲೂರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಗುವುದು. ಅಂದು ಬೆಳಗ್ಗೆ 11 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂವಾದ ಕಾರ್ಯಕ್ರಮ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕರೆತರಬೇಕು. ಮಧ್ಯಾಹ್ನ 3 ಗಂಟೆಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.

ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಮಾತನಾಡಿ, ಈ ಹಿಂದೆ ಧಾರವಾಡದಲ್ಲಿ ನಡೆದ ಬಸವ ಮಠಾಧೀಶರ ಸಭೆಯಲ್ಲಿ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿತ್ತು. ಶ್ರೀ ಮಠದಿಂದ ಅಭಿಯಾನಕ್ಕೆ ಹೆಚ್ಚಿನ ಸಹಕಾರ ನೀಡಲಾಗುತ್ತದೆಂದರು.

ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅ.1ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಮ, ವ್ಯಸನಮುಕ್ತ, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸುವುದು ತುರ್ತು ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ವಿವಿಧ ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಪುಷ್ಪಗಿರಿ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಎಂ.ಎನ್. ಕುಮಾರಸ್ವಾಮಿ, ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಆನಂದ್ ಪಟೇಲ್, ರವಿಕುಮಾರ್, ಬಿ.ಕೆ. ಚಂದ್ರಕಲಾ, ಗೀತಾ ಶಿವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net