

ತಿ.ನರಸೀಪುರ: 12ನೇ ಶತಮಾನ ಕನ್ನಡ ಸಾಹಿತ್ಯಕ್ಕಷ್ಟೇ ಅಲ್ಲದೆ ನಾಡಿನ ಸಾಮಾಜಿಕ ಚಳವಳಿಗೆ ಅತ್ಯಂತ ಮಹತ್ವದ ಕಾಲಘಟ್ಟವಾಗಿತ್ತು. ಕನ್ನಡವನ್ನು ಶ್ರೀಮಂತಗೊಳಿಸಿದ ವಚನ ಸಾಹಿತ್ಯ, ಸಾಹಿತ್ಯದ ಜತೆಗೆ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದ ಪ್ರಮುಖ ಕಾಲಘಟ್ಟವದು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಣ್ಣಿಸಿದರು.
ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಸಾಹಿತ್ಯ ಪರಿಷತ್, ಶ್ರೀ ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ಮತ್ತು ಬಸವೇಶ್ವರ ಯುವಕರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಶರಣ ಸಾಹಿತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯ, ಶರಣ ಸಾಹಿತ್ಯಗಳು ಕೇವಲ ಸಾಹಿತ್ಯವಲ್ಲ. ಅವುಗಳ ಕಾರ್ಯ ವಿಧಾನ, ಸಾಮಾಜಿಕ ಪರಿವರ್ತಕ ಶಕ್ತಿ, ಸಾಮಾಜ ಸುಧಾರಣೆ ಮೂಲ ಧ್ಯೇಯದೊಂದಿಗೆ ರಚಿತವಾದದ್ದು ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಎಂದರು.
ಬಸವಣ್ಣ ಅವರು ತಮ್ಮ ತತ್ವ ಮತ್ತು ಆದರ್ಶಗಳ ಮೂಲಕ ಕರ್ನಾಟಕದಲ್ಲೇ ಅಲ್ಲ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದ್ದಾರೆ. ಅವರು ವಚನಗಳನ್ನು ರಚಿಸುವುದಲ್ಲದೆ ಸಾಮಾಜಿಕ ಪರಿವರ್ತನೆಯಲ್ಲೂ ಸಕ್ರಿಯರಾಗಿ ಅನುಭವ ಮಂಟಪವನ್ನು ಸ್ಥಾಪಿಸಿ ಸಮಾಜದ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿ ವರ್ಣ, ಜಾತಿ, ವರ್ಗಭೇದ, ಮೂಢನಂಬಿಕೆ, ಅಸಮಾನತೆ ಮತ್ತು ಕಂದಾಚಾರಗಳನ್ನು ಅಳಿಸುವುದಕ್ಕಾಗಿ ಬಸವಣ್ಣ ಅವರು ಸಾಕಷ್ಟು ಶ್ರಮಿಸಿದರು ಎಂದು ಅಂಶಿ ಪ್ರಸನ್ನ ಕುಮಾರ್ ತಿಳಿಸಿದರು.
ವಾಟಾಳು ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ರಾಜೇಂದ್ರ ಶ್ರೀಗಳು ಪ್ರಾತಃಸ್ಮರಣೀಯರು. ಬಸವಣ್ಣ ಅವರು ತತ್ವಗಳು ಕೇವಲ ಪ್ರದರ್ಶನ, ಮಾತಾಡುವುದಕ್ಕೆ ಸೀಮಿತವಾಗಬಾರದು. ಬಸವಣ್ಣ ಅವರ ವಿಚಾರ, ಆದರ್ಶಗಳನ್ನು ಅನುಸರಿಸಿದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಪ್ರೊ.ಚಂದ್ರಶೇಖರಯ್ಯ ಮತ್ತು ಸಮಾಜ ಸೇವಕ ಕೆ.ಎಸ್.ಮಾದಪ್ಪ ಅವರನ್ನು ಸನ್ಮಾನಿಸಲಾಯಿತು. ಮಾಡ್ರಹಳ್ಳಿ ಪಟ್ಟದ ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ, ಇಮ್ಮಡಿ ಶಿವಕುಮಾರಸ್ವಾಮಿ, ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ, ಇಮ್ಮಡಿ ಬಸವಲಿಂಗಸ್ವಾಮಿ, ಸಹಜಾನಂದ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಮಲ್ಲಪ್ಪ ಸ್ವಾಮೀಜಿ, ನಾಗಪ್ಪ ಸ್ವಾಮೀಜಿ, ಮಹದೇವ ಸ್ವಾಮೀಜಿ, ನಂದಿಕೇಶ್ವರ ಸ್ವಾಮೀಜಿ, ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಡಿ ಸಿದ್ದಪ್ಪ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ರವಿ, ಕಾರ್ಯದರ್ಶಿ ತುಂಬಲ ನಾಗರಾಜು(ಬಸವಣ್ಣ), ಶ್ರೀ ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಬ್ಬೆಹುಂಡಿ ಸೋಮಶೇಖರಪ್ಪ, ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಸುಗಂಧರಾಜು, ಕಾರ್ ಮಲ್ಲಪ್ಪ, ಓಂಕಾರಮೂರ್ತಿ, ಗ್ರಾಮದ ಮುಖಂಡರಾದ ಕುಮಾರ್, ಮಹದೇವಪ್ಪ, ಪ್ರಸನ್ನ, ಚಂದ್ರು, ಸೋಮು, ಚಿನ್ನಬುದ್ದಿ, ರಾಜಬುದ್ದಿ, ಕುರುಬೂರು ಶಿವು, ಆಡಿಟರ್ ಮಹದೇವಸ್ವಾಮಿ ಹಾಗೂ ಇತರರು ಇದ್ದರು.