

ಸರಗೂರು: ನಾಗರಿಕತೆ ಬೆಳೆದಂತೆ ವೈಚಾರಿಕತೆಯೂ ಬೆಳೆದು ಬಂದಿದೆ. ವೈಚಾರಿಕ ಕ್ರಾಂತಿಗೆ ಜಗಜ್ಯೋತಿ ಬಸವಣ್ಣ ಅವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡಿಕೊಂಡು ಸಪ್ತಶೀಲಗಳನ್ನು ಮೈಗೂಡಿಸಿಕೊಳ್ಳುವುದೇ ವೈಚಾರಿಕ ಕ್ರಾಂತಿಯ ಫಲವಾಗಿದೆ ಎಂದು ತಹಸೀಲ್ದಾರ್ ಮೋಹನಕುಮಾರಿ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಸರಗೂರು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯದೊಂದಿಗೆ ವಿ.ಮಾದಪ್ಪ ಹಾಗೂ ಪಾರ್ವತಮ್ಮಣಿ ಮತ್ತು ಪಾರ್ವತಮ್ಮ ಪಾಟೀಲ್ ನಂಜಪ್ಪ ಡಾ.ಮೃತ್ಯುಂಜಯಪ್ಪ ಅವರ ಸ್ಮರಣಾರ್ಥವಾಗಿ ದತ್ತಿ ಉಪನ್ಯಾಸ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗುರಿ ಇಲ್ಲದ ಜೀವನ ನಿರರ್ಥಕ. ಗುರಿ ಮುಟ್ಟಲು ಸತತ ಅಭ್ಯಾಸ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಆಲೋಚನೆ, ಹವ್ಯಾಸ ರೂಢಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ವಿವೇಕ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತೆ. ವಿವೇಕವಿಲ್ಲದಿದ್ದರೆ ನಾವು ಎಷ್ಟೇ ಓದಿದರೂ ಉಪಯೋಗಕ್ಕೆ ಬಾರದು. ಸುಲಭದಲ್ಲಿ ಯಶಸ್ಸು ಗಳಿಸುವುದೂ ಅಸಾಧ್ಯ. ಹಾಗಾಗಿ ನಿರಂತರ ಶ್ರಮದ ಜೀವನ ನಮ್ಮದಾಗಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ಡಿ.ರವಿಕುಮಾರ್ ಮಾತನಾಡಿ, ಪರೀಕ್ಷೆ ಎದುರಿಸಲು ನೆನಪಿನ ಶಕ್ತಿ ಬಹುಮುಖ್ಯ. ಟಾನಿಕ್‌ಗಳಿಂದ ನೆನಪಿನ ಶಕ್ತಿ ಬರಲ್ಲ. ಬಾಲ್ಯದಲ್ಲಿಯೇ ಇದಕ್ಕೆ ಸೂಕ್ತ ಭದ್ರತೆ ಬೀಳಬೇಕು. ಭವಿಷ್ಯ ರೂಪಗೊಳ್ಳಲು ಆಲೋಚನೆ, ಜೀವನದ ಕ್ರಮ, ನಮ್ಮ ಇಚ್ಛಾಶಕ್ತಿಯನ್ನು ಒಳಗೊಂಡಿರುತ್ತದೆ. ವಿವೇಕಾನಂದರು, ಅಬ್ದುಲ್ ಕಲಾಂ, ಅಂಬೇಡ್ಕರ್ ಅವರ ಜೀವನ ಪದ್ಧತಿ ನಮಗೆ ಮಾದರಿ ಆಗಬೇಕು. ಎಲ್ಲದಕ್ಕೂ ದೇವರನ್ನು ಬೇಡುವ ಬದಲು ನಮ್ಮ ಕರ್ತವ್ಯ ಪಾಲಿಸಬೇಕು. ತಂದೆ-ತಾಯಿ, ಶಿಕ್ಷಕರಿಗೆ ಗೌರವ ನೀಡಬೇಕು. ಆಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು.
ಜೆಎಸ್‌ಎಸ್ ಕಾಲೇಜು ಉಪನ್ಯಾಸಕ ಸಿದ್ದಲಿಂಗಸ್ವಾಮಿ ಮಾತನಾಡಿ, ತಮಿಳುನಾಡಿನಲ್ಲಿ ಶಿಕ್ಷಣ ಪೂರೈಸಿದ ನಿಜಗುಣ ಶಿವಯೋಗಿಗಳು ಪೆರಿಯಾರ್ ರಾಮಸ್ವಾಮಿ ಅವರ ಹೋರಾಟಗಳಿಂದ ಪ್ರಭಾವಿತರಾಗಿದ್ದರು. ಮೇಲ್ವರ್ಗದ ವಿರುದ್ಧ ಹೋರಾಟ ನಡೆಸಿದ್ದರು. ನಂತರ ಅಧ್ಯಾತ್ಮದಲ್ಲಿ ತೊಡಗಿಸಿಕೊಂಡ ಇವರು ಜ್ಞಾನವೃದ್ಧರಾಗಿದ್ದಾರೆ. ಇವರ ಜೀವನ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.
ಮನುಷ್ಯ ಭೋಗವನ್ನೇ ಬಯಸುತ್ತಾನೆ. ಭೋಗ ಜೀವನ ನಡೆಸಲು ಅಗತ್ಯವಾಗಿ ಬೇಕಾಗಿರುವ ಹಣ ಸಂಪಾದನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದಾನೆ. ಸುಖವನ್ನೇ ಬಯಸುವ ಮನಸ್ಸುಗಳು ಜಜ್ಜರಿತವಾಗುತ್ತಿವೆ. ಇದು ಅಧರ್ಮದ ಮಾರ್ಗ. ಬದುಕಿನಲ್ಲಿ ಧರ್ಮವನ್ನು ಅನುಸರಿಸಬೇಕು. ಧರ್ಮ ಸ್ಥಾಯಿ ಆಗಿರಬೇಕು. ಧರ್ಮ, ಅರ್ಥದ ಬದುಕು ನಡೆಸಿದರೆ ಮೋಕ್ಷ ಲಭಿಸುತ್ತದೆ ಎಂದು ಹೇಳಿದರು.
ದಾಸೋಹಿಗಳು ಸುಧಾ ಮೃತ್ಯುಂಜಯಪ್ಪ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ದಯಾನಂದ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ.ಕೆಂಡಣ್ಣಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಗುರುಸ್ವಾಮಿ, ವರ್ತಕರ ಮಂಡಳಿಯ ಅಧ್ಯಕ್ಷ ಎಸ್.ಪಿ.ಪ್ರಸಾದ್, ಅಂತರಸಂತೆ ಹೋಬಳಿ ಘಟಕದ ಅಧ್ಯಕ್ಷ ಅಶೋಕ್, ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ವೃಂದಾ ಎನ್.ಕೆ., ಮುಖಂಡರಾದ ನಾಗಣ್ಣ, ಡಿ.ಪಿ. ನಟರಾಜು ಇತರರು ಇದ್ದರು.