

ಹೊಸದುರ್ಗ: ಬಸವಾದಿ ಶರಣರ ತತ್ವ ಸಂದೇಶ, ವಚನ ಸಾಹಿತ್ಯದಿಂದ ಜಗತ್ತಿನ ಭೂಪಟದಲ್ಲಿ ಕರ್ನಾಟಕದ ಹೆಸರು ಅಜರಾಮರವಾಗಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ದೆಹಲಿಯಲ್ಲಿ ಮಂಗಳವಾರ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ 2ನೇ ದಿನದ ತುಮ್ಹಾರೆ ಸಿವಾ ಔರ್ ಕೋಯಿ ನಹೀ ವಚನ ನೃತ್ಯರೂಪಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಬಸವಣ್ಣ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಕ್ರಾಂತಿಯ ಮೂಲಕ ಜಗತ್ತಿನ ಅಂಧಕಾರವನ್ನು ತೊಡೆದು ಬೆಳಕನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ ಮಹನೀಯರು ಎಂದರು.
ಮನುಷ್ಯ ಸೋಮಾರಿಯಾಗದೆ ಸದಾ ಕಾಯಕ ಶೀಲನಾಗಿರಬೇಕು. ಕೆಲಸದ ಆದಾಯವನ್ನು ಸಮಾಜದ ಒಳಿತಿನ ಕಾರ್ಯಗಳಿಗೆ ವಿನಿಯೋಗ ಮಾಡುವ ದಾಸೋಹ ತತ್ವವನ್ನು ಅಳವಡಿಕೊಳ್ಳಬೇಕು.
ಆತ್ಮ ಸಾಕ್ಷಾತ್ಕಾರಕ್ಕಾಗಿ ಇಷ್ಟಲಿಂಗ ಪೂಜೆಯನ್ನು ಮಾಡಬೇಕು ಎನ್ನುವ ಕಾಯಕ, ದಾಸೋಹ ಹಾಗೂ ಇಷ್ಟಲಿಂಗ ನಿಷ್ಠೆಯ ಮೂರು ಮುಖ್ಯ ತತ್ವಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಬಸವಣ್ಣ ರಚಿಸಿದ ಆಯ್ದ 44 ವಚನಗಳನ್ನು ಹಿಂದಿಯಲ್ಲಿ ಅನುವಾದಿಸಿ, ಹಾಡಿಸಿ, ರೂಪಿಸಿರುವ ನೃತ್ಯರೂಪಕವನ್ನು ಒಂದು ಗಂಟೆ ಹತ್ತು ನಿಮಿಷಗಳ ಕಾಲ ನಮ್ಮ ಕಲಾತಂಡ ಅಭಿನಯಿಸಲಿದೆ.
ದೆಹಲಿಯಲ್ಲಿ ಕನ್ನಡ ಶಾಲೆ ಇರುವಂಥದ್ದು ಅತ್ಯಂತ ಸಂತೋಷ. ಇಲ್ಲಿನ ಮಕ್ಕಳಿಗೆ ಅಪ್ಪಟ ಕನ್ನಡಿಗ ಬಸವಣ್ಣನವರ ವಚನಗಳಾಧಾರಿತ ನೃತ್ಯ ಪ್ರದರ್ಶನ ಏರ್ಪಡಿಸಿರುವುದು ಅಭಿನಂದನಾರ್ಹ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬಸವಣ್ಣ ಜಗತ್ತಿನ ಮೊದಲ ಪಾರ್ಲಿಮೆಂಟ್ ನಡೆಸಿದವರು. ಆ ಮಾದರಿಯಲ್ಲಿ ಇಂಗ್ಲೆಂಡ್, ಭಾರತ ಮೊದಲಾದ ಪಾರ್ಲಿಮೆಂಟ್‌ಗಳು ನಡೆಯುತ್ತಿವೆ.
ನರೇಂದ್ರ ಮೋದಿ ಅವರಿಗೆ ಹಿಂದಿಗೆ ಅನುವಾದಿಸಿದ ಬಸವಣ್ಣನ ವಚನಗಳ ಪುಸ್ತಕವನ್ನು ನೀಡಿದ್ದೇನೆ. ಅದರಿಂದ ಪ್ರೇರಿತರಾದ ಪ್ರಧಾನಿಗಳು ಅನೇಕ ಬಾರಿ ಬಸವಣ್ಣನ ಹೆಸರನ್ನು ಉಲ್ಲೇಖಿಸುತ್ತಾರೆ ಎಂದರು.
ಸಂಸದ ಡಾ. ಉಮೇಶ್ ಜಾದವ್ ಮಾತನಾಡಿ, ನಾನು ಬಸವಣ್ಣ ಕರ್ಮಭೂಮಿಯಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾಗಿರುವುದು ಪುಣ್ಯ ಎಂದು ಭಾವಿಸುತ್ತೇನೆ. ಮೊದಲಿಗೆ ಬಸವಣ್ಣನವರ ಸಂದೇಶ ಹೊತ್ತು ಸಾಗುತ್ತಿರುವ ಈ ಅಭಿಯಾನ ಬಹಳ ದೊಡ್ಡದು ಎಂದರು.
ವೇದಿಕೆಯಲ್ಲಿ ರಂಗ ಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ, ಸಂಸ್ಥೆಯ ಪದಾಧಿಕಾರಿಗಳಾದ ಅರವಿಂದ ರಾವ್, ಮೈಲಾರಪ್ಪ, ಪ್ರಶಾಂತಕುಮಾರ್ ಇತರರಿದ್ದರು.