ರಾಜ್ಯದಲ್ಲಿ ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆಯ ತುರ್ತು ಅಗತ್ಯವಿತ್ತು: ಎಂ.ಎಸ್. ಆಶಾದೇವಿ

Raghu_15_Books_release_@_Nayana (1)
Published on

ಬೆಂಗಳೂರು: ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸುವ ಹಿಂದೆ ರಾಜಕೀಯ ಕಾರ್ಯತಂತ್ರ ಇದ್ದರೂ, ರಾಜ್ಯದ ದೃಷ್ಟಿಯಿಂದ ಇದರ ತುರ್ತು ಅಗತ್ಯವಿತ್ತು ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ಹೇಳಿದರು.

ಚಾರುಮತಿ ಪ್ರಕಾಶನ ಮತ್ತು ಭಾಗವತರು ಸಂಘಟನೆ ಸಹಯೋಗದಲ್ಲಿ ನಗರದ ನಯನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್.ಜಿ. ಸಿದ್ಧರಾಮಯ್ಯ ಅವರ ‘ಕಂಗಳೇ ಕರುಳಾಗಿ’ ಹಾಗೂ ಎಲ್. ಹನುಮಂತಯ್ಯ ಅವರ ‘ಜನ ಮನೆಯ ಜನ ಗಣ ಮನ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕರ್ನಾಟಕ ಹೊರತುಪಡಿಸಿ ದೇಶದ ಯಾವುದೇ ರಾಜ್ಯ ಸಾಂಸ್ಕೃತಿಕ ನಾಯಕರನ್ನು ಘೋಷಿಸಿಲ್ಲ. ಆದರೆ ಕರ್ನಾಟಕದ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಮಾಡಿದೆ. ಇದನ್ನು ಕೇಂದ್ರೀಕರಿಸಿ ಎಸ್.ಜಿ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಿಯನ್ನು ಅರ್ಪಣೆ ಮಾಡಿರುವ ಬಗ್ಗೆ ಅವರು ಪ್ರಸ್ತಾಪಿಸಿದರು.

ಇದೀಗ ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಘೋಷಣೆಯ ಪರಂಪರೆಯನ್ನು ಆರಂಭಿಸಿದೆ. ಎಲ್ಲ ರೀತಿಯಿಂದಲೂ ನಾವು ದಾರಿ ತಪ್ಪಿದ್ದೇವೆ.ರಾಜಕೀಯವಾಗಿ ಕೆಲವೆಡೆ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತೇವೆ. ಇನ್ನೊಂದೆಡೆ ಅದಕ್ಕೂ ನಮ್ಮ ನಿಜ ಜೀವನಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬಸವಣ್ಣ ನಮಗೆ ದಾರಿದೀಪ ಎಂದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಎಲ್ಲ ಸಮುದಾಯ, ರಾಜ್ಯಗಳಲ್ಲಿ ಸಾಂಸ್ಕೃತಿಕ ನಾಯಕರು ಇರುತ್ತಾರೆ. ಬಸವಣ್ಣ ಅವರು ನಮ್ಮ ನಾಡಿನ ಬಹುದೊಡ್ಡ ಸಾಂಸ್ಕೃತಿಕ ನಾಯಕರಾಗಿದ್ದು, ಅವರ ವಚನಗಳು ಎಲ್ಲರಿಗೂ ಕಲ್ಪವೃಕ್ಷ ಎಂದು ಹೇಳಿದರು.

ಕವಿ ಎಲ್. ಹನುಮಂತಯ್ಯ, ಎಸ್.ಜಿ. ಸಿದ್ಧರಾಮಯ್ಯ, ಭಾಗವತರು ಸಂಘಟನೆಯ ಕೆ. ರೇವಣ್ಣ ಹಾಗೂ ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net