

ಚಳ್ಳಕೆರೆ: 12ನೇ ಶತಮಾನದಲ್ಲಿ ಸಮಾನತೆಯನ್ನು ಎತ್ತಿ ಹಿಡಿದ ಬಸವಣ್ಣನೇ ಜಗದ ಜ್ಞಾನದ ಬೆಳಕು ಎಂದು ಕೂಡಲ ಸಂಗಮದ ಬಸವಧರ್ಮ ಪೀಠದ ಜಗದ್ಗುರು ಡಾ.ಗಂಗಾ ಮಾತಾಜಿ ಹೇಳಿದರು.
ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಸೋಮವಾರ ರಾಷ್ಟ್ರೀಯ ಬಸವದಳ ಟ್ರಸ್ಟ್ ಹಮ್ಮಿಕೊಂಡಿದ್ದ 891ನೇ ಬಸವಜಯಂತಿ ಮತ್ತು ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಲಿಂಗಭೇದವಿಲ್ಲದೆ ಸಮಾನತೆಗಾಗಿ ಚಳುವಳಿ ನಡೆಸಿದ ಬಸವಣ್ಣನ ಬದುಕಿನ ಆದರ್ಶ ಸಮಾಜದಲ್ಲಿ ಉಳಿಯಬೇಕಿದೆ. ಪ್ರತಿ ಹಳ್ಳಿಗಳಲ್ಲೂ ವಚನ ಮತ್ತು ತತ್ವಗಳ ಕುರಿತು ಜಾಗೃತಿ ಮೂಡಿಸಲು ಅನುಭವ ಮಂಟಪದಂತ ಸಂಬಂಧಗಳನ್ನು ಕಟ್ಟಬೇಕು ಎಂದು ಹೇಳಿದರು.
ಕವಯತ್ರಿ ವಿ. ಶಬಿನಾ ಮಹಮ್ಮದ್ ಅಲಿ ಮಾತನಾಡಿ, ಪ್ರತಿಯೊಬ್ಬರಿಗೂ ತನ್ನ ಕಾಯಕದಲ್ಲಿ ದೇವರನ್ನು ಕಾಣುವ ಕಲ್ಪನೆ ನೀಡಿದ ಬಸವಣ್ಣ ಆದರ್ಶವಾಗಿ ಕಾಣುತ್ತಾರೆ. ಅನುಭವ ಮಂಟಪ ಸ್ಥಾಪನೆಯಲ್ಲಿ ಸಾಮಾಜಿಕ ಚಿಂತನೆ ಕಂಡುಕೊಂಡಂತೆ ಸರ್ವರಿಗೂ ಸ್ಥಾನಮಾನ ಕಲ್ಪಿಸಿದ್ದಾರೆ. ಬಸವಣ್ಣರ ದೂರದೃಷ್ಟಿಯ ಸಮಾನತೆ ಕಲ್ಪನೆ ಸಾರ್ವತ್ರಿಕ ಸತ್ಯವಾಗಿ ಉಳಿದುಕೊಂಡಿದೆ ಎಂದರು.
ಮೆರವಣಿಗೆ
ಬಸವಣ್ಣನವರ ಪ್ರತಿಮೆ ಅನಾವರಣ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಆರಂಭದಲ್ಲಿ ಧ್ವಜಾರೋಹಣ ನೆರವೇರಿತು. ಬಳಿಕ ಟ್ರಾೃಕ್ಟರ್‌ನಲ್ಲಿ ಬಸವಣ್ಣನ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಚಿತ್ರನಾಯ್ಕನಹಳ್ಳಿ, ಹಿರೇಹಳ್ಳಿ, ಘಟಪರ್ತಿ, ಕಸವಿಗೊಂಡನಹಳ್ಳಿ ಸೇರಿ ಸುತ್ತಮುತ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಎಂ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಪೀಠದ ದಾನೇಶ್ವರಿ ಮಾತಾಜಿ, ನಿಬ್ಬಗೂರು ಅವಧೂತ ಮಠದ ಶ್ರೀ ತಿಪ್ಪೇರುದ್ರ ತಾತ, ಡಾ.ವೀರೇಶ್, ಜಗದೀಶ್, ಕೆ.ವೀರೇಶ್, ಪ್ರತಿಭಾ ಬಸವರಾಜ್, ಮೈಲನಹಳ್ಳಿ ದಿನೇಶ್, ಚನ್ನವೀರಪ್ಪ, ಲಿಂಗಾರೆಡ್ಡಿ, ಚಂದ್ರಣ್ಣ, ಪಂಚಾಕ್ಷರಪ್ಪ, ಬೋರಣ್ಣ, ಶಿವಣ್ಣ, ನಾಗೇಶ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.