

ಬೆಂಗಳೂರು:"ಜಗತ್ತಿಗೆ ಕಾಯಕ ಸಿದ್ಧಾಂತ ಬೋಧಿಸಿದವರು ಬಸವಾದಿ ಶರಣರು' ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ "ದತ್ತಿ ಉಪನ್ಯಾಸ' ಮತ್ತು "ಕಾಯಕ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರಮ ಸಂಸತಿ ಪ್ರತಿಪ್ರಾದಿಸಿದ ಶರಣರು, ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿ ಕರ್ಮ ಸಿದ್ಧಾಂತವನ್ನು ಕಾಯಕ ಸಿದ್ಧಾಂತವನ್ನಾಗಿ ಪರಿವರ್ತಿಸಿದರು. ಆಧ್ಯಾತ್ಮಿಕ ಚಿಂತನೆಗಿಂತ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದರು. 12ನೇ ಶತಮಾನದಲ್ಲಿ ಜಡ್ಡುಗಟ್ಟಿದ ಸಮಾಜದ ಕೊಳೆಯನ್ನು ಕ್ರಾಂತಿಕಾರಕ ಚಿಂತನೆ ಮೂಲಕ ತೊಳೆದ ಜಗದ್ಗುರು ಬಸವಣ್ಣರ ನೇತೃತ್ವದಲ್ಲಿ ಶರಣರು ವೈಚಾರಿಕತೆ ಬೀಜ ಬಿತ್ತಿ ಕರ್ಮ ಸಿದ್ಧಾಂತ ಬದಗೊತ್ತಿ ಕಾಯಕ ಸಿದ್ಧಾಂತ ಪ್ರತಿಪಾದಿಸಿದರು. ಈ ಮೂಲಕ ವಿಶ್ವಮಾನವ ಪರಿಕಲ್ಪನೆ ಮೂಡಿಸಿದರು ಎಂದರು.
"ಕಾಯಕವೇ ಕೈಲಾಸ' ವೆಂದು ಬಸವಣ್ಣ ಸಾರಿದರು. ಕಾಯಕದಲ್ಲಿ ಮೇಲಿಲ್ಲ-ಕೀಳಿಲ್ಲ. ಎಲ್ಲರೂ ಒಂದೇ ಎಂಬ ತತ್ವವನ್ನು ಜನರಿಗೆ ತಿಳಿಸಿದರು. ಬಸವಣ್ಣನವರ ಕಾಯಕ ತತ್ವದ ಪ್ರೇರಣೆಯಿಂದ ಶರಣೆಯರು ಅನೇಕ ಕಾಯಕಗಳನ್ನು ಕೈಗೆತ್ತಿಗೊಂಡರು. ಭಕ್ತಿ, ಶ್ರದ್ದೆಯಿಂದ ಕಾಯಕ ಮಾಡಿ ಬಂದ ಆದಾಯವನ್ನು ಸದ್ವಿನಿಯೋಗ ಮಾಡುವ ಬಗ್ಗೆ ಹೇಳಿಕೊಟ್ಟರು ಎಂದು ಸೋಮಶೇಖರ್ ವಿವರಿಸಿದರು. ಬಸವನಗುಡಿ ನ್ಯಾಷನಲ್ ಕಾಲೇಜು ಪ್ರಾಂಶುಪಾಲೆ ಡಾ.ಕಮಲಾ, ಉಪನ್ಯಾಸಕ ರುದ್ರೇಶ್ ಮತ್ತಿತರರಿದ್ದರು.