ಕ್ರಾಂತಿಯ ಬೀಜ ಬಿತ್ತಿದ್ದ ಸಮಾಜ ಸುಧಾರಕ

IMG_20240510_102853101
Published on

ತಿ.ನರಸೀಪುರ: ವಚನಗಳ ಮೂಲಕವೇ ಬಸವಣ್ಣನರು ಜ್ಞಾನದ ಬೆಳಕು ಚೆಲ್ಲಿ, ಕ್ರಾಂತಿಯ ಬೀಜ ಬಿತ್ತಿದ್ದ ಸಮಾಜ ಸುಧಾರಕ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಅಭಿಪ್ರಾಯಪಟ್ಟರು.


ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಣ್ಣನವರ ಅನುಭವ ಮಂಟಪ ಎಂಬುದೇ ಅದ್ಬುತ ಪರಿಕಲ್ಪನೆ. ಅನುಭವ ಮಂಟಪದ ಮೂಲಕ ಎಲ್ಲ ವರ್ಗದವರನ್ನೂ ಒಂದೆಡೆ ತರುವ ಪ್ರಯತ್ನವನ್ನು ಬಸವಣ್ಣನವರು ಮಾಡಿದ್ದರು. ಆ ಮೂಲಕ ಸಮಾಜದಲ್ಲಿ ಬೇರೂರಿದ್ದ ತಾರತಮ್ಯ, ಅಂಧ ಶ್ರದ್ಧೆಯನ್ನು ದೂರ ಮಾಡುವ ಕಾರ್ಯ ಮಾಡಿದ್ದಾರೆ. ಅವರ ತತ್ವಾದರ್ಶಗಳು ಇಂದಿಗೂ ಮಾದರಿಯಾಗಿವೆ ಎಂದು ಹೇಳಿದರು.


ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ನೀಡಬೇಕು ಎನ್ನುವ ಬಸವಣ್ಣನವರ ಪರಿಕಲ್ಪನೆ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಂದೆ ಸಾಗಲು ಸಹಾಯಕವಾಗಿದೆ. ಅವರ ತತ್ವಾದರ್ಶಗಳು ಯುವ ಪೀಳಿಗೆಗೆ ಸ್ಫೂರ್ತಿ ಎಂದರು.


ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಕಿರಗಸೂರು ಮಹಾದೇವಸ್ವಾಮಿ, ಸ್ಫಟಿಕ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಾಜೇಶ್ ಪಟೇಲ್, ಕುಮಾರ್, ತೋಂಟೇಶ್, ಸಂತೋಷ್, ಜಗದೀಶ್, ಜ್ಞಾನೇಂದ್ರ ಮೂರ್ತಿ, ನಾಗರಾಜಪ್ಪ, ಬಿಲಿಗೆರೆಹುಂಡಿ ಮಹದೇವು, ಹೆಳವರಹುಂಡಿ ರಾಜೇಶ್ ಮತ್ತಿತರರು ಹಾಜರಿದ್ದರು.


ತಾಲೂಕು ಕಚೇರಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಗಣ್ಯರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್ ಮಾತನಾಡಿ, ಬಸವಣ್ಣನವರ ಆದರ್ಶ ಮತ್ತು ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕಿನೆಡೆಗೆ ಸಾಗಬೇಕು ಎಂದರು. ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net