

ಚನ್ನಗಿರಿ: ಇಂದಿನ ರಾಜಕಾರಣಿಗಳು ಬಸವಣ್ಣನವರ ಅದರ್ಶಗಳನ್ನು ಪಾಲನೆ ಮಾಡಬೇಕಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.
ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಲಿಂಗೇಶ್ವರ ಸ್ವಾಮಿ, ಶ್ರೀ ಹಾಲಸ್ವಾಮಿಗಳವರ ಸಂಸ್ಮರಣೆ, ಶ್ರೀ ಶ್ರೀಕಂಠ ಸ್ವಾಮಿಗಳವರ 40ನೇ ವರ್ಷದ ಸಂಸ್ಮರಣೆ, ಶ್ರೀ ಜಯದೇವ ಸ್ವಾಮಿಗಳವರ ಚತುರ್ಥ ಸಂಸ್ಮರಣೋತ್ಸವ ಮತ್ತು ಬಸವತತ್ವ ಸಮಾರಂಭ, 25ನೇ ವರ್ಷದ ಶ್ರಾವಣ ಮಾಸ ಕಾರ್ಯಕ್ರಮದ ಉದ್ಘಾಟಿಸಿ, ಮಾತನಾಡಿದರು.
ಬಸವತತ್ವದ ಪಾಲನೆ ಮಾಡಿದವರಿಗೆ ಜೀವನದಲ್ಲಿ ಸುಲಭವಾಗಿ ಮುಕ್ತಿ ಲಭಿಸುತ್ತದೆ. 12ನೇ ಶತಮಾನದಲ್ಲಿ ಶೋಷಿತರ ಪರವಾಗಿ ಮತ್ತು ಸ್ವಾತಂತ್ರ್ಯ ಕಾಣದ ಮಹಿಳೆಯರ ಪರವಾಗಿ ನಿಂತವರು ಬಸವಣ್ಣನವರು ಡಾ.ಅಂಬೇಡ್ಕರ್ ಅವರು ಬೌದ್ದ ಧರ್ಮದ ಬದಲು ಲಿಂಗವಂತ ಧರ್ಮ ಸೇರಿದ್ದರೆ ವಿಶ್ವದಲ್ಲಿ ಈಗ ಇರುವಂಥ ಹೆಸರಿಗಿಂತ ಹೆಚ್ಚು ಪ್ರಚಾರದಲ್ಲಿ ಮನೆ ಮನದಲ್ಲಿ ಇರುತ್ತಿದ್ದರು ಎಂದರು.
ಶಿವಲಿಂಗೇಶ್ವರ ಪ್ರಥಮದರ್ಜೆ ಕಾಲೇಜು ಮಂಜೂರಾದರೂ ನಿವೇಶನ ಸಿಕ್ಕಿರಲಿಲ್ಲ. ಅಂಥ ಸಮಯದಲ್ಲಿ ತಾಲೂಕಿನ ಮಕ್ಕಳಿಗೆ ವಿದ್ಯಾಭ್ಯಾಸ ಅನುಕೂಲವಾಗಲೆಂದು ಉಚಿತವಾಗಿ 6.5 ಎಕರೆ ಜಮೀನು ನೀಡಿದರು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆ ಅನುಕೂಲವಾಗಿದೆ ಎಂದು ತಿಳಿಸಿದರು.
ಸೊರಬ ಜಡೆ ಸಂಸ್ಥಾನ ಮಠದ ಶ್ರೀ ಮಹಂತ ಸ್ವಾಮೀಜಿ ಮಾತನಾಡಿ, ಭೂಮಿಯಲ್ಲಿ 83 ಲಕ್ಷ ಜೀವಿರಾಶಿಗಳಿವೆ. ಅವುಗಳಿಗೆ ಉಪದೇಶ, ಪ್ರವಚನ ಬೇಕಾಗಿಲ್ಲ. ಕಾರಣ ಅವುಗಳಿಗೆ ಮೋಸ, ವಂಚನೆ, ಆಸೆ ಸೇರಿದಂತೆ ಯಾವುದು ಇರುವುದಿಲ್ಲ. ದಿನದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವಾಗಲೂ ಎಲ್ಲರ ಜತೆ ಸೇರುತ್ತವೆ. ಮನುಷ್ಯನ ಸ್ಥಿತಿಗತಿಗಳು ಬೇರೆ ಎಷ್ಟು ಇದ್ದರು. ಮತ್ತೆ ಬೇಕು ಎನ್ನುವ ಆಸೆಗೆ ಕೊನೇ ಇರುವುದಿಲ್ಲ. ಜನನ- ಮರಣ ಇರುವುದು ಶಾಶ್ವತವಾಗಿ ತಿಳಿದಿದ್ದರೂ ಮುಂದಿನ ಪೀಳಿಗೆಗೆ ಬೇಕಾಗುತ್ತದೆ ಎಂದು ಕೂಡಿಸುತ್ತಾನೆ. ಅದ್ದರಿಂದ ಇವರಿಗೆ ಮಠ ಹಾಗೂ ಗುರುಗಳಿಂದ ಉಪದೇಶ, ಪ್ರವಚನ ಬೇಕು ಎಂದರು.
ಚನ್ನಗಿರಿಯ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ಗುರು- ಮಠಗಳ ಪರಂಪರೆ ಇಲ್ಲದೆ ಹೋಗಿದ್ದರೆ ಸಮಾಜದಲ್ಲಿ ಕಲುಷಿತ ವಾತವರಣ ಇರುತ್ತಿತ್ತು. ಮನುಷ್ಯನಿಗೆ ಕಡ್ಡಾಯವಾಗಿ ಗುರುಗಳ ಉಪದೇಶಬೇಕು. ಮಠಮಾನ್ಯಗಳು ಭಕ್ತರಿಗಾಗಿ ಸದಾ ಬಾಗಿಲು ತೆರೆದಿರುತ್ತದೆ ಎಂದರು.