ವಚನಜ್ಯೋತಿ ಬಳಗ ವಿಜಯನಗರದಲ್ಲಿ ಆಯೋಜಿಸಿದ್ದ ಬಸವ ಉತ್ಸವ; ಬೇಲಿಮಠ ಶ್ರೀ, ಎಂ.ಕೃಷ್ಣಪ್ಪ ಭಾಗಿ

basava
Published on

ಬೆಂಗಳೂರು: ಎಲ್ಲರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮುನ್ನೆಡೆಸಿದ ಬಸವಣ್ಣನವರು ಸಕಲ ಜೀವಾತ್ಮಕ್ಕೂ ಲೇಸನ್ನೇ ಬಯಸಿದವರು. ಸರ್ವಜನ ಹಿತವೇ ಬಸವತತ್ವದ ಸಾರ ಎಂದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅಭಿಪ್ರಾಯಿಸಿದ್ದಾರೆ. ವಚನಜ್ಯೋತಿ ಬಳಗವು ವಿಜಯನಗರದಲ್ಲಿ ಆಯೋಜಿಸಿದ್ದ ಬಸವ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದೇ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು, ಅವರು ಸಮಗ್ರ ನಾಡಿಗೆ ಸೇರಿದವರು. ಆ ನಿಟ್ಟಿನಲ್ಲಿ ಸರ್ವಜನರ ಹಿತವನ್ನು ಸಾರುವ ಮೂಲಕ ಸಮಾಜದಲ್ಲಿ ಹೊಸ ಹೆಜ್ಜೆಗುರುತನ್ನು ಮೂಡಿಸಿರುವ ಬಸವಣ್ಣನವರ ತತ್ವವನ್ನು ಪ್ರಚಾರ ಮಾಡಲು ಅವರ ಜಯಂತಿಯಂದು ಹಮ್ಮಿಕೊಂಡಿರುವ ಬಸವ ಉತ್ಸವ ನಿಜಕ್ಕೂ ಅರ್ಥಪೂರ್ಣ ಎಂದು ಶ್ಲಾಸಿದರು.
ಬಸವ ಉತ್ಸವಕ್ಕೆ ಚಾಲನೆ ನೀಡಿದ ಬೇಲಿಮಠದ ಶ್ರೀ ಶಿವರುದ್ರಸ್ವಾಮಿಗಳು ಬಸವಣ್ಣನವರೊಡನೆ ಹೆಜ್ಜೆ ಎಂದರೆ ಕೇವಲ ಮೆರವಣಿಗೆಯಲ್ಲ, ಅದು ನಿರಂತರವಾಗಿ ಬಸವ ತತ್ತ್ವಗಳ ಜೊತೆ ಹೆಜ್ಜೆ ಹಾಕುವುದು, ವಚನ ಸಂದೇಶವನ್ನು ಪರಿಪಾಲಿಸಬೇಕು. ಬಹಿರಂಗವಾಗಿ ಹೆಜ್ಜೆ ಹಾಕುವುದಷ್ಟೇ ಅಲ್ಲ ಅಂತರಂಗದಲ್ಲೂ ಬಸವತತ್ತ್ವದೊಡನೆ ನಡೆಯಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮಾತನಾಡಿ, ಬಸವಣ್ಣನವರ ಸಂದೇಶದ ಕಂಪನ್ನು ವಚನಜ್ಯೋತಿ ಬಳಗ ಮುಂಜಾನೆಯೇ ಹರಡಿದ್ದು, ಸಾಂಸ್ಕೃತಿಕ ನಾಯಕತ್ವಕ್ಕೆ ಪೂರಕವಾಗಿ ಕಲಾತಂಡಗಳೊಂದಿಗೆ ಸಾಹಿತಿ ಕಲಾವಿದರನ್ನು ಸೇರಿಸಿ ಹೆಜ್ಜೆ ಹಾಕಿಸುತ್ತಿರುವುದು ಗುಣಾತ್ಮಕ ಕಾರ್ಯಕ್ರಮವೆಂದು ಬಣ್ಣಿಸಿದರು.
ಮುಂಜಾನೆ ವಿಜಯನಗರದಿಂದ ಆರಂಭವಾದ ಬಸವ ಉತ್ಸವವು ಸಂಜೆ ಎಂ.ಜಿ.ರಸ್ತೆಯಲ್ಲಿ ವಚನ ಗಾಯನದೊಂದಿಗೆ ಮುಕ್ತಾಯವಾಯಿತು.
ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ವಿಶ್ವಬಂಧು ಫೌಂಡೇಷನ್ನಿನ ಡಾ. ಸಿದ್ದಯ್ಯ ಗುರೂಜಿ, ಹಿರಿಯ ವಿದ್ವಾಂಸ ಡಾ. ಸಿ.ಯು. ಮಂಜುನಾಥ್, ಬೆಂ.ವಿ. ಶಿಕ್ಷಕರ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಮುನಿರಾಜಪ್ಪ, ವಚನಜ್ಯೋತಿ ಬಳಗದ ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ ಮತ್ತಿತರರು ಬಸವ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net