

ಬೆಂಗಳೂರು: ಬಸವಣ್ಣ, ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಗಳನ್ನು ತೆಗೆದು ಹಾಕಿ ಇಷ್ಟಲಿಂಗ ನೀಡಿದರು. ಆದರೆ, ಮೂಢನಂಬಿಕೆ ವಿಚಾರದಲ್ಲಿ ಇಂದು ಮಧ್ಯವರ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಸವ ತತ್ವ ಪಾಲಿಸುವವರು ಈ ಬಗ್ಗೆ ಆಲೋಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಸವ ವೇದಿಕೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 'ಬಸವ ಜಯಂತಿ', 'ಬಸವಶ್ರೀ' ಮತ್ತು 'ವಚನ ಸಾಹಿತ್ಯಶ್ರೀ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಿಂದ ಅನಿಷ್ಠಗಳನ್ನು ದೂರ ಮಾಡಲು ಬಸವಣ್ಣ ಸದಾ ಕಾಲಕ್ಕೂ ಜೀವಂತವಾಗಿರಬೇಕು. ಬಸವಣ್ಣ ಅಲ್ಪಾಯುಷಿಯಾಗಿದ್ದು, ಕಲ್ಯಾಣ ಕ್ರಾಂತಿಯ ನಂತರ ಬಹಳ ದಿನ ಬದುಕಲಿಲ್ಲ. ಅವರು ಮನಸು ಮಾಡಿದ್ದರೆ, ಕಲ್ಯಾಣದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಇರಬಹುದಿತ್ತು. ಆದರೆ, ಅವರು ತಾವು ನಂಬಿದ ತತ್ವಕ್ಕಾಗಿ ಜೀವನವನ್ನೇ ತ್ಯಾಗ ಮಾಡುವ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದರು.
ಇಂದಿನ ಪರಿಸ್ಥಿತಿಯಲ್ಲಿ ಸತ್ಯ ಹೇಳಲು ಎಲ್ಲರೂ ಹಿಂಜರಿಯುತ್ತಾರೆ. ಬಸವಣ್ಣ ಕಾಯಕ ಮತ್ತು ದಾಸೋಹದ ಬಗ್ಗೆ ಹೇಳುತ್ತಾರೆ. ನಾವು ಕಾಯಕ ಬಿಟ್ಟು ದಾಸೋಹದ ಬಗ್ಗೆ ಮಾತನಾಡುತ್ತೇವೆ. ಉತ್ಪಾದನೆ ಇಲ್ಲದೆ ದಾಸೋಹ ಹೇಗೆ ಸಾಧ್ಯ? ರಾಜಕಾರಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಎಲ್ಲರೂ ಅದಕ್ಕೆ ಆಕರ್ಷಿತರಾಗುತ್ತಾರೆ. ಜನರು ರಾಜಕಾರಣದಿಂದ ದೂರ ಹೋದಷ್ಟು ರಾಜಕಾರಣ ಹದಗೆಡುತ್ತದೆ. ಜನರು ರಾಜಕಾರಣದ ಜೊತೆಗಿದ್ದರೆ ಮಾತ್ರ ರಾಜಕಾರಣ ಸುಧಾರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರಿಗೆ "ಬಸವಶ್ರೀ ಪ್ರಶಸ್ತಿ' ಹಾಗೂ ಹಿಂದುಸ್ತಾನಿ ಸಂಗೀತ ಗಾಯಕ ಅಂಬಯ್ಯ ನುಲಿ ಅವರಿಗೆ "ಬಸವ ಸಾಹಿತ್ಯಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಸ್ರೋ ಮಾಜಿ ಅಧ್ಯ ಡಾ.ಕಿರಣ್ ಕುಮಾರ್ "ಬಸವಜ್ಯೋತಿ' ಸಂಚಿಕೆ ಬಿಡುಗಡೆ ಮಾಡಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ಬಸವ ವೇದಿಕೆ ಅಧ್ಯಕ್ಷ ಡಾ.ಸಿ. ಸೋಮಶೇಖರ ಮತ್ತಿತರರಿದ್ದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಶೇ.40 ಕಮಿಷನ್ ಆರೋಪ ಮಾಡಿದವರು ಈಗ ಎಲ್ಲಿದ್ದಾರೊ ಗೊತ್ತಿಲ್ಲ. ನಾನು ಈ ಬಗ್ಗೆ ಪಾರದರ್ಶಕತೆ ಕಾಪಾಡಲು ಯಾವುದೇ ಟೆಂಡರ್ ನೀಡುವ ಮೊದಲು ಪರಿಶೀಲಿಸಲು ನ್ಯಾ. ರತ್ನಕಲಾ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೆ. ಅವರ ಪರಿಶೀಲನೆಯಿಂದ ರಾಜ್ಯದ ಬೊಕ್ಕಸಕ್ಕ ಸಾವಿರಾರು ಕೋಟಿ ರೂ. ಉಳಿತಾಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.