

ಬೆಳಗಾವಿ: ಅಕ್ಷಯ ತೃತೀಯದಂದು ಆಚರಿಸಲಾಗುವ ಬಸವ ಜಯಂತಿಯ ಜೊತೆಗೆ ಜಗದ್ಗುರು ಪಂಚಾಚಾರ್ಯರ ಜಯಂತಿಯನ್ನು ಆಚರಿಸುವುದು ಸಮುದಾಯದ ಸಮಷ್ಟಿ ಮತ್ತು ಸಮನ್ವಯದ ಹಿನ್ನೆಲೆಯಲ್ಲಿ ಸೂಕ್ತವಾಗಿದೆ ಎಂದು ಪಂಚಪೀಠದ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ.
ಬಸವಾದಿ ಶರಣರ, ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಬೇಕೆಂಬ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಪ್ರಸ್ತಾವನೆ ಸೂಕ್ತವಾಗಿದ್ದು, ಮಹಾಸಭೆ ನಿಲುವನ್ನು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು, ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಸ್ವಾಗತಿಸಿದ್ದಾರೆ.
ಸಮುದಾಯದ ಸಂಘಟನೆಗಾಗಿ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿಸಿದ ಹಾನಗಲ್ ಕುಮಾರ ಸ್ವಾಮಿಗಳು ಮೂಲ ಆಚಾರ್ಯರನ್ನು ಹಾಗೂ ಬಸವಾದಿ ಶಿವಶರಣರನ್ನು ಒಂದುಗೂಡಿಸಿಕೊಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶಂಕರ ಬಿದರಿಯವರು ಭಾವನಾತ್ಮಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು, ಸಮಾಜದ ಒಗ್ಗಟ್ಟು, ದೂರದೃಷ್ಟಿಯ ಹಿನ್ನೆಲೆಯಲ್ಲಿ ಎಲ್ಲರೂ ಸಹಮತ ವ್ಯಕ್ತಪಡಿಸಬೇಕೆಂದು ಸಲಹೆ ನೀಡಿದ್ದಾರೆ.
ಬಸವಣ್ಣನವರು ಎಲ್ಲರನ್ನೂ ಅಪ್ಪಿಕೊಂಡ ಶ್ರೇಷ್ಠ ಶರಣರಾಗಿದ್ದು, ಅವರ ಜಯಂತಿಯಂದು ಜಗದ್ಗುರು ಪಂಚಾಚಾರ್ಯರ, ಎಲ್ಲ ಶರಣರ ಜಯಂತಿ ಆಚರಿಸುವುದರಿಂದ ವೀರಶೈವ-ಲಿಂಗಾಯತರು ಒಗ್ಗಟ್ಟನ್ನು ಸಾಧಿಸಲು ನಾಂದಿಯಾಗುತ್ತದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಮುದಾಯಕ್ಕೆ ಸೂಕ್ತ ಸ್ಥಾನಮಾನ, ಗೌರವಗಳು ದೊರೆಯದೆ ಹಿನ್ನೆಡೆ ಅನುಭವಿಸಬೇಕಾಗುತ್ತದೆ ಎಂದು ಜಗದ್ಗುರುಗಳು ಕಳವಳ ವ್ಯಕ್ತಪಡಿಸಿದ್ದಾರೆ.