

ಗದಗ: ಮದ್ಯ ಸಿಗದೆ ಹತಾಶೆಗೊಳಗಾಗಿ ಕುಡುಕರು ಮದ್ಯದಂಗಡಿಗಳಿಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಎಂಎಸ್ಐಎಲ್ ಮದ್ಯದಂಗಡಿಯವರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಮುಳಗುಂದ ರಸ್ತೆಯಲ್ಲಿರುವ ಎಂಎಸ್ಐಎಲ್ ಮದ್ಯದಂಗಡಿಯವರು ತಮ್ಮ ಅಂಗಡಿಯ ಶೆಟರ್ಸ್ಗೆ ಎರಡೂ ಕಡೆಗೆ ಬೀಗದ ಜತೆಗೆ ಶೆಟರ್ಸ್ ಮೇಲೆ ಎಕ್ಸ್ ಆಕಾರದಲ್ಲಿ ಕಬ್ಬಿಣದ ಬಾರ್ಗಳನ್ನು ಅಳವಡಿಸಿ ಮತ್ತಷ್ಟು ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ವ್ಯಸನಕ್ಕೆ ಬಿದ್ದಿರುವ ಕುಡುಕರು ಮದ್ಯದಂಗಡಿಗಳಿಗೆ ಕನ್ನ ಹಾಕಲು ಮುಂದಾಗಿರುವುದರಿಂದ ಅಂಗಡಿಯವರು ಮುಂಜಾಗ್ರತೆ ವಹಿಸಿದ್ದಾರೆ. ಇತ್ತೀಚೆಗೆ ಎಂಎಸ್ಐಎಲ್ ಮದ್ಯದಂಗಡಿಯ ಶೆಟರ್ಸ್ಗೆ ಹಾಕಿದ್ದ ಬೀಗ ಮುರಿದು ಮದ್ಯ ಕಳವು ಮಾಡಲಾಗಿತ್ತು. 1.5 ಲಕ್ಷ ರೂ. ನಗದು ಇದ್ದರೂ ಅದನ್ನು ಮುಟ್ಟದೆ ಬರೀ ಮದ್ಯದ ಪೌಚ್ಗಳನ್ನಷ್ಟೇ ಕಳ್ಳತನ ಮಾಡಿ ಪರಾರಿಯಾಗಿದ್ದರು. ಹಣ ಬಿಟ್ಟು ಕೇವಲ ಮದ್ಯ ಕದ್ದಿದ್ದಾರೆ ಎಂದರೆ ಇದು ಕುಡುಕರ ಕರಾಮತ್ತು ಎಂದು ಪೊಲೀಸರು ಅಂದಾಜಿಸಿದ್ದರು.
1.50 ಲಕ್ಷ ರೂ. ಮೌಲ್ಯದ ಮದ್ಯ ಕಳವು
ಶ್ರೀನಿವಾಸಪುರ: ತಾಲೂಕಿನ ವಳಗೇರನಹಳ್ಳಿ ಕ್ರಾಸ್ ಬಳಿ ಇರುವ ಲಕ್ಷ್ಮೀ ಬಾರ್ ಆಂಡ್ ರೆಸ್ಟೋರೆಂಟ್ ಬೀಗ ಮುರಿದಿ ರುವ ದುಷ್ಕರ್ವಿುಗಳು ಸುಮಾರು 1.50 ಲಕ್ಷ ರೂ. ಮೌಲ್ಯದ ಮದ್ಯ ಕಳವು ಮಾಡಿದ್ದಾರೆ.
ಮದ್ಯ ನೀಡುವಂತೆ ಪತ್ರಕರ್ತರ ಬೆದರಿಕೆ
ವಿಜಯಪುರ: ಮದ್ಯ ನೀಡುವಂತೆ ಬೆದರಿಕೆ ಹಾಕಿದ ನಾಲ್ವರು ಪತ್ರಕರ್ತರ ವಿರುದ್ಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ವಿಜಯಪುರ ತಾಲೂಕು ಹೊನ್ನುಟಗಿ ಗ್ರಾಮದ ಸೌರಬ ಜನರಲ್ ಸ್ಟೋರ್ಗೆ ಏ.2ರ ಸಂಜೆ 4.30ಕ್ಕೆ ಹೋಗಿದ್ದ ನಾಲ್ವರು, ನಾವು ಸ್ಥಳೀಯ ಪತ್ರಿಕೆ ವರದಿಗಾರರು ಹಾಗೂ ಖಾಸಗಿ ವಾಹಿನಿಯ ಕ್ಯಾಮರಾಮನ್. ನಮಗೆ ಮದ್ಯಕೊಡಿ. ಇಲ್ಲದಿದ್ದರೆ ಪತ್ರಿಕೆ, ಸುದ್ದಿ ವಾಹಿನಿಯಲ್ಲಿ ನಿಮ್ಮ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ಅಂಗಡಿ ಮಾಲೀಕ ಸುರೇಶ ರಾಮಪ್ಪ ತೇರದಾಳ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.