ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್
Published on

ಹಾಸನ: ಬುಕರ್ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರಿಗೆ ರಾಜ್ಯ ಸರ್ಕಾರ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದರಿಂದ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಬಾನು ಮುಷ್ತಾಕ್ ಅವರ ಎದೆಯ ಹಣತೆ ಅನುವಾದಿತ ಕೃತಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸುವುದರೊಂದಿಗೆ ಹಾಸನ ಜಿಲ್ಲೆಯ ಹೆಸರು ವಿಶ್ವದೆಲ್ಲೆಡೆ ಪಸರಿಸಿತ್ತು. ಇದೀಗ ದಸರಾ ಉದ್ಘಾಟನೆಗೆ ಆಹ್ವಾನ ಸಿಕ್ಕಿರುವುದು ಹಾಸನ ಜಿಲ್ಲೆಗೆ ಮತ್ತೊಂದು ಗರಿ ದೊರಕಿದಂತಾಗಿದೆ.

ಬಾನು ಮುಷ್ತಾಕ್ ಏ.3, 1948ರಂದು ಹಾಸನದಲ್ಲಿ ಜನಿಸಿದರು. ಬಿಎಸ್ಸಿ ಪದವೀಧರರು. ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ವಕೀಲೆ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಉದ್ಯಮಿ ಮೊಹಿಯುದ್ದೀನ್ ಅವರನ್ನು ವಿವಾಹವಾಗಿದ್ದಾರೆ. 1974ರಲ್ಲಿ ನಿಯತಕಾಲಿಕೆಯೊಂದರಲ್ಲಿ ಬಾನು ಮುಷ್ತಾಕ್ ಅವರ ಮೊದಲ ಕಥೆ ಪ್ರಕಟವಾಯಿತು. 1980ರ ಸಮಯದಲ್ಲಿ ಕನ್ನಡ ಸಾಹಿತ್ಯದ ಬಂಡಾಯ ಚಳವಳಿಯೊಂದಿಗೆ ಗುರುತಿಸಿಕೊಂಡರು. ಸಾಮಾಜಿಕ, ಆರ್ಥಿಕ ನ್ಯಾಯ, ರೈತ ಹೋರಾಟ ಸೇರಿದಂತೆ ವಿವಿಧ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. 1983ರಲ್ಲಿ ಹಾಸನ ಪುರಸಭೆಗೆ ಸದಸ್ಯರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. 1990ರಲ್ಲಿ ಪತ್ರಿಕೋದ್ಯಮ ತೊರೆದು ಬರವಣಿಗೆಯ ಜತೆಗೆ ವಕೀಲಿ ವೃತ್ತಿ ಆಯ್ಕೆಮಾಡಿಕೊಂಡರು.

ಆರು ದಶಕಗಳ ಬರವಣಿಗೆಯ ಜೀವನದಲ್ಲಿ 60ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಅವರ ಕೃತಿಗಳು ಉರ್ದು, ಅರೇಬಿಕ್, ಇಂಗ್ಲಿಷ್, ಪಂಜಾಬಿ, ತಮಿಳು, ಮಲಯಾಳಂ ಇನ್ನಿತರ ಭಾಷೆಗಳಿಗೆ ಅನುವಾದಗೊಂಡಿವೆ.

ಸೆಪ್ಟೆಂಬರ್‌ನಲ್ಲಿ ಬಿಡುವು ಮಾಡಿಕೊಳ್ಳಲು ಹೇಳಿದ್ದ ಸಿಎಂ: ಬಾನು ಮುಷ್ತಾಕ್ ಹರ್ಷ

ನಾಡಹಬ್ಬ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಆಹ್ವಾನ ಸುದ್ದಿ ತಿಳಿದು ಸಂತಸವಾಗಿದೆ ಎಂದು ಸಾಹಿತಿ ಬಾನು ಮುಷ್ತಾಕ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಹರೇನ್ ಪ್ರವಾಸದಲ್ಲಿರುವ ಅವರು ಶುಕ್ರವಾರ ದೂರವಾಣಿ ಮೂಲಕ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಸ್ನೇಹಿತರಿಂದ ವಿಷಯ ತಿಳಿಯಿತು. ಜುಲೈ ತಿಂಗಳಲ್ಲಿ ಕೇರಳ ಪ್ರವಾಸದಲ್ಲಿದ್ದ ಸಂದರ್ಭ ಮುಖ್ಯಮಂತ್ರಿಗಳು ಕರೆ ಮಾಡಿ ಸೆಪ್ಟೆಂಬರ್‌ನಲ್ಲಿ ಬಿಡುವು ಮಾಡಿಕೊಳ್ಳುವಂತೆ ಹೇಳಿದ್ದರು. ಆದರೆ, ದಸರಾ ಉದ್ಘಾಟನೆಗೆ ಅವಕಾಶ ಕಲ್ಪಿಸುತ್ತಾರೆ ಎಂದು ತಿಳಿದಿರಲಿಲ್ಲ. ದೊಡ್ಡ ಅವಕಾಶ ಲಭಿಸಿರುವುದು ಸಂತಸ ತಂದಿದೆ ಎಂದರು.

ಆ.27ಕ್ಕೆ ಕರ್ನಾಟಕಕ್ಕೆ ಬರಲಿದ್ದೇನೆ. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಗುರುತು ಸಿಗುವಂತಾಗಿತ್ತು. ಇದು ಸರ್ಕಾರ, ರಾಜ್ಯದ ಜನತೆ, ನನಗೆ ವೈಯಕ್ತಿಕವಾಗಿಯೂ ಸಂತಸ ಉಂಟು ಮಾಡಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net