

ಬಂಟ್ವಾಳ: ಮೂಡುಬಿದಿರೆ-ಬಂಟ್ವಾಳ ರಸ್ತೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ, ಬಂಟ್ವಾಳದಿಂದ ಪುಚ್ಚೆಮೊಗರುವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ-ಗುಂಡಿಗಳು ತುಂಬಿದ್ದು, ಸೊರ್ನಾಡುನಿಂದ ಮಾಡಮೆವರೆಗಿನ ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರ ದುಸ್ತರವಾಗಿದೆ.
ಇದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಮುಖ್ಯರಸ್ತೆಯಾಗಿದ್ದು, ರಾಜ್ಯ ಹೆದ್ದಾರಿಯೆಂದು ಮೇಲ್ದರ್ಜೆಗೇರಲು ಎಲ್ಲ ಅರ್ಹತೆ ಹೊಂದಿದೆ. ಬಂಟ್ವಾಳದಿಂದ ಮೂಡುಬಿದಿರೆ, ಕಾರ್ಕಳ, ಉಡುಪಿ, ವಾಮದಪದವು, ವೇಣೂರು, ನಾರಾವಿ, ಪುಂಜಾಲಕಟ್ಟೆಗಳಿಗೆ ಈ ರಸ್ತೆಯಿಂದ ಸಂಪರ್ಕವಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇದರಲ್ಲಿ ಸಾಗುತ್ತವೆ.
ಈ ರಸ್ತೆ ಸಂಪೂರ್ಣ ಡಾಂಬರೀಕರಣಗೊಂಡು ಹಲವು ವರ್ಷಗಳೇ ಕಳೆದಿವೆ. ಕಳೆದ ಬಾರಿ ಬಂಟ್ವಾಳದಿಂದ ಸೊರ್ನಾಡುವರೆಗೆ, ಪುಚ್ಚೆಮೊಗರುನಿಂದ ಮಾಡಮೆವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿತ್ತು. ಕಾರ್ಕಳದ ಗುತ್ತಿಗೆದಾರರು ಗುತ್ತಿಗೆ ಪಡೆದು ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿ ಕೊನೆಗೆ ಹೇಗೋ ಕಾಮಗಾರಿ ಮುಗಿಸಿದ್ದರು. ಇದೀಗ ಮಳೆಗಾಲದಲ್ಲಿ ಹೊಂಡ-ಗುಂಡಿ ಉಂಟಾಗಿದೆ.
ಬಂಟ್ವಾಳದಿಂದ ಮುಂದಕ್ಕೆ ಸೊರ್ನಾಡು ಜಂಕ್ಷನ್‌ವರೆಗೆ ಉತ್ತಮ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಅಣ್ಣಳಿಕೆ ಜಂಕ್ಷನ್‌ನಲ್ಲಿ ರಸ್ತೆ ಡಾಂಬರು ಎದ್ದುಹೋಗಿ ಹೊಂಡ-ಗುಂಡಿ ಉಂಟಾಗಿದೆ. ಮಳೆಗಾಲದಲ್ಲಿ ಈ ಗುಂಡಿಯಲ್ಲಿ ನೀರು ತುಂಬಿ ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರರಿಗೆ ಕೆಸರು ನೀರಿನ ಅಭಿಷೇಕ ತಪ್ಪಿದ್ದಲ್ಲ. ಅಣ್ಣಳಿಕೆ, ಕೊಲ, ರಾಯಿ, ಕುದ್ಕೋಳಿಗಳಲ್ಲಿ ರಸ್ತೆ ತೀರಾ ಹದಗೆಟ್ಟಿದೆ.
ಮೂಡುಬಿದಿರೆಯಿಂದ ಪುಚ್ಚೆಮೊಗರು, ಸಂಗಬೆಟ್ಟು, ಸಿದ್ದಕಟ್ಟೆ, ಮಾಡಮೆವರೆಗೆ ರಸ್ತೆ ಅಭಿವೃದ್ಧಿಗೊಳಿಸಲಾಗಿದ್ದು, ರಸ್ತೆ ಉತ್ತಮವಾಗಿದೆ. ಮಾಡಮೆಯಿಂದ ಸೊರ್ನಾಡುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯದೆ ಹೊಂಡ-ಗುಂಡಿಯಿಂದ ಕುಡಿದೆ. ಕಳೆದ ವರ್ಷ ಈ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ದೊರಕಿದ್ದು, ಅಣ್ಣಳಿಕೆಯಿಂದ ರಾಯಿವರೆಗೆ ಕಾಮಗಾರಿಗೆ ಶಿಲಾನ್ಯಾಸವೂ ನೆರವೇರಿತ್ತು. ಕಾರ್ಕಳದ ಗುತ್ತಿಗೆದಾರರಿಗೆ ಗುತ್ತಿಗೆ ವಹಿಸಲಾಗಿತ್ತು. ವಿಧಾನಸಭಾ ಚುನಾವಣೆ ಬಳಿಕ ಕಾಮಗಾರಿ ಆರಂಭವಾಗುತ್ತದೆಂದು ಲೋಕೋಪಯೋಗಿ ಇಲಾಖೆ ತಿಳಿಸಿತ್ತು. ಆದರೆ ಇದೀಗ ಗುತ್ತಿಗೆದಾರರರೂ ನಾಪತ್ತೆ, ಇಲಾಖೆಯೂ ಮೌನ ವಹಿಸಿದೆ.
ಈ ರಸ್ತೆಯಲ್ಲಿ ಬಂಟ್ವಾಳ ಮೂಡುಬಿದಿರೆಗೆ ನಿತ್ಯ ಸಂಚಾರದ ಬಸ್ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ. ದ್ವ್ವಿಚಕ್ರ ವಾಹನ ಸವಾರರು ಹೊಂಡ-ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ. ಸೊರ್ನಾಡು-ಅಣ್ಣಳಿಕೆ ನಡುವೆ ತಿರುವಿನಲ್ಲಿ ರಸ್ತೆ ಕಿರಿದಾಗಿದ್ದು ಜತೆಗೆ ರಸ್ತೆ ಬದಿ ಬಳ್ಳಿ ಹರಡಿದ್ದು, ರಸ್ತೆ ಸಮಸ್ಯೆಗಳ ಬಗ್ಗೆ ರಾಯಿ ಗ್ರಾಮ ಪಂಚಾಯಿತಿ ಆಡಳಿತ ಲೋಕೋಪಯೋಗಿ ಇಲಾಖೆಯ ಗಮನ ಸೆಳೆದಾಗ ಮಳೆಗಾಲ ಮುಗಿದ ಬಳಿಕ ರಸ್ತೆ ಸರಿಪಡಿಸಲಾಗುವುದು ಎಂಬ ಉತ್ತರ ನೀಡಿದ್ದಾರೆ ಎಂದು ಪಂಚಾಯಿತಿ ತಿಳಿಸಿದೆ. ಈ ರಸ್ತೆಯ ಸಮಸ್ಯೆಗಳನ್ನು ಸಂಬಂಧಿತರು ಗಮನಿಸಿ ಶೀಘ್ರ ಪರಿಹರಿಸಬೇಕೆಂದು ಸಾರ್ವಜನಿಕರ ಆಗ್ರಹ.
ರಸ್ತೆ ಹೊಂಡಗಳಿಂದ ನಿತ್ಯ ಪ್ರಯಾಣ ಕಷ್ಟವಾಗಿದೆ. ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸಿಯಾಗಿದೆ. ರಸ್ತೆ ಅಭಿವೃದ್ಧಿ ಬಗ್ಗೆ ಸಂಬಂಧಿತ ಇಲಾಖೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. - ಸಂತೋಷ್ ಕುಮಾರ್ ರಾಯಿಬೆಟ್ಟು, ರಾಯಿ ಗ್ರಾ.ಪಂ. ಅಧ್ಯಕ್ಷ https://www.vijayavani.net/mangalore-kadri-cricketers-rice-distribution