ಬಂಟ್ವಾಳ ಸಾಹಿತ್ಯ ಸಮ್ಮೇಳನ

Published on

ಬಂಟ್ವಾಳ: ತಾಲೂಕಿನ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಚಿ ಕೊಳ್ನಾಡು ಹೈಸ್ಕೂಲಿನಲ್ಲಿ ಹಿರಿಯ ಸಾಹಿತಿ ಎಳೆಯರ ಗೆಳೆಯ ಮುಳಿಯ ಖ್ಯಾತಿಯ ಮುಳಿಯ ಶಂಕರ ಭಟ್ಟ ಸರ್ವಾಧ್ಯಕ್ಷತೆಯಲ್ಲಿ ಜನವರಿ 4 ಮತ್ತು 5ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಅವರು ಸಮ್ಮೇಳನದ ವಿವರಗಳನ್ನು ನೀಡಿದರು.

4ರಂದು ಕನ್ನಡ ಭುವನೇಶ್ವರಿ ಮೆರವಣಿಗೆ ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರದಿಂದ ಆರಂಭಗೊಳ್ಳಲಿದೆ. ವಸ್ತುಪ್ರದರ್ಶನವನ್ನು ಡಾ.ಮುಕುಂದ ಪ್ರಭು, ಪುಸ್ತಕ ಮಳಿಗೆಯನ್ನು ಚಂದ್ರಹಾಸ ರೈ ಬಾಲಾಜಿಬೈಲು, ಸಮ್ಮೇಳನವನ್ನು ಕನ್ನಡ ಪ್ರಾಧ್ಯಾಪಕ ಡಾ.ನಾಗವೇಣಿ ಮಂಚಿ ಉದ್ಘಾಟಿಸುವರು. ಶಾಸಕ ರಾಜೇಶ್ ನಾಕ್‌ಉಳಿಪ್ಪಾಡಿ, ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಪ್ರಮುಖರು ಮುಖ್ಯ ಅತಿಥಿಗಳಾಗಿರುವರು.ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

5ರಂದು ಬೆಳಗ್ಗೆ ಗಮಕ ವಾಚನ, ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ ಭಟ್ ಅವರೊಂದಿಗೆ ಸಂವಾದ, ನೃತ್ಯ ವೈಭವ ನಡೆಯಲಿದೆ. 10.30ರಿಂದ ಅನಿತಾ ನರೇಶ್ ಮಂಚಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ವಾಚನ, ಗಾಯನ, ಕುಂಚ ಕಾರ್ಯಕ್ರಮ ನಡೆಯಲಿದ್ದು, ಕೃಷಿ ಹಾಗೂ ಸಾಹಿತ್ಯ ವಿಚಾರದಲ್ಲಿ ವಿಚಾರಗೋಷ್ಠಿ ಸಂಕಪ್ಪ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಧ್ಯಾಹ್ನ 1ರಿಂದ ಉಪನ್ಯಾಸವನ್ನು ಡಾ.ವೀಣಾ ತೋಳ್ಪಾಡಿ ಹಾಗೂ ಅನಸೂಯಾ ರಾವ್ ಸಾಲೆತ್ತೂರು ನೀಡಿವರು. ಮಧ್ಯಾಹ್ನ 2ಕ್ಕೆ ಸಂಘ-ಸಂಸ್ಥೆಗಳಿಗೆ ಪುರಸ್ಕಾರ, 3ರಿಂದ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಮಾರೋಪ ಸಮಾರಂಭ ಸಂಜೆ 4ರಿಂದ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ ವಹಿಸಲಿದ್ದು, ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟ ಸಮಾರೋಪ ಭಾಷಣ ಮಾಡುವರು. ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಸಂಯೋಜಕ ರಾಮಪ್ರಸಾದ್ ರೈ ತಿರುವಾಜೆ, ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಗೌರವ ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಿಮಾನ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಚಿ, ಸಂಚಾಲಕ ಅಬ್ಬಾಸ್ ಆಲಿ ಬೋಳಂತೂರು, ಕೋಶಾಧಿಕಾರಿ ಸುಲೈಮಾನ್ ಜಿ.ಸುರಿಬೈಲು, ಮುಖ್ಯಶಿಕ್ಷಕಿ ಸುಶೀಲಾ ವಿಟ್ಲ, ಆರ್ಥಿಕ ಸಮಿತಿ ಸಂಚಾಲಕ ನಿಶ್ಚಲ್ ಜಿ.ಶೆಟ್ಟಿ ಕಲ್ಲಾಡಿ, ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಅಬುಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net