ಬನ್ನಿ ಮಹಾಂಕಾಳಿ ಕರಗ ಮಹೋತ್ಸವ

Published on

* ಮೈಸೂರು ದಸರಾ ಮಾದರಿಯಲ್ಲಿ ಅಲಂಕಾರ

* ವಿದ್ಯುತ್ ದೀಪಾಲಂಕಾರ ಮೆರುಗು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದ ಮಂಡಿಪೇಟೆಯಲ್ಲಿ ಭಕ್ತ ಸಂರಕ್ಷಣಾರ್ಥವಾಗಿ ಶಕ್ತಿ ದೇವತೆಯಾಗಿ ನೆಲಗೊಂಡಿರುವ ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಜು.16ರಂದು ನೆರವೇರಲಿದ್ದು, ಈ ನಿಮಿತ್ತ ನಗರ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ.

ಮೈಸೂರು ದಸರಾ ಮಾದರಿಯಲ್ಲಿ 15 ದಿನ ನಗರ ಸಿಂಗಾರಗೊಂಡು ಸಡಗರ ಕಂಡುಬರುತ್ತದೆ. ಚಾಮುಂಡೇಶ್ವರಿ ಬನ್ನಿಮಹಾಂಕಾಳಿ ನಗರದ ಶಕ್ತಿದೇವತೆಗಳಾಗಿದ್ದು, ಆಷಾಢ ಮಾಸದ ಮೊದಲ ವಾರದಲ್ಲಿ ಬನ್ನಿಮಹಾಂಕಾಳಿ, 2ನೇ ವಾರ ಚಾಮುಂಡೇಶ್ವರಿ ಕರಗಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ರೋಚಕ ಇತಿಹಾಸ: ರಾಮನಗರದ ಶಕ್ತಿ ದೇವತೆಯಾಗಿರುವ ಬನ್ನಿಮಹಾಂಕಾಳಿ ಅಮ್ಮನವರನ್ನು ಸುಮಾರು 400 ವರ್ಷಗಳಿಗೂ ಮಿಗಿಲಾಗಿ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ. ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ರಾಯರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆ ಅವರಿಗೆ ಕನಸೊಂದು ಕಂಡು ತನಗೊಂದು ನೆಲೆ ಕಾಣಿಸುವಂತೆ ದೇವಿ ಕೇಳುತ್ತಾಳೆ. ಈ ಮಾತು ಕೇಳಿ ಸಂತೋಷಗೊಂಡ ಭಕ್ಷಿ ಬಾಲಾಜಿ ರಾಯರು ಎಲ್ಲಿ ನೆಲೆ ಕಲ್ಪಿಸಬೇಕು ಎಂದು ಕೇಳುತ್ತಾರೆ.

ಆಗ ದೇವಿ ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ದೇವಾಲಯ ಕಟ್ಟಿಸು ಎಂದು ತಿಳಿಸುತ್ತಾಳೆ. ಅದರಂತೆ ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಇಂದಿನ ರಾಮನಗರದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತು ಬಿಡುತ್ತದೆ. ಆಗ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು ಎಂದು ಇತಿಹಾಸ ಹೇಳುತ್ತಾ ಬಂದಿದ್ದಾರೆ.

ಈ ಮಾತು ಜನರಿಂದ ಜನರಿಗೆ ಹರಡಿ ಇತಿಹಾಸ ಹೇಳುತ್ತಿದೆ. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂತಲೂ ಕರೆಯುತ್ತಾರೆ. ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿ))))ಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತ್ತಿದ್ದರು ಎನ್ನಲಾಗಿದೆ. ಈಗ ಮಲ್ಲಿಗೆ ಅಲಂಕಾರದ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಕರಗ ಧಾರಣೆ

ಆರ್.ಎ. ನರಸಿಂಹಮೂರ್ತಿ ಅವರು ಸುಮಾರು 48 ವರ್ಷ ಒಬ್ಬರೇ ಕರಗಧಾರಕರಾಗಿ ಕರಗ ಧಾರಣೆ ಮಾಡಿದ್ದರು. ನಂತರ 20 ವರ್ಷಗಳಿಂದ ಅವರ ಮಗ ಆರ್.ಎನ್. ಯೋಗೇಶ್ ಕರಗ ಧಾರಣೆ ಮಾಡಿಕೊಂಡು ಬರುತ್ತಿದ್ದಾರೆ.

ಕರಗ

ಮಂಗಳವಾರ ಸಂಜೆ ಮಲ್ಲಿಗೆ ಮೊಗ್ಗಿನಿಂದ ಶೃಂಗಾರಗೊಂಡ ಕರಗ ದೇವಾಲಯದ ಆವರಣದಿಂದ ಹೊರಡುತ್ತದೆ. ತಿಗಳರಬೀದಿ, ರಾಘವೇಂದ್ರ ಕಾಲನಿ, ಐಜೂರು, ಛತ್ರದಬೀದಿ, ಅಗ್ರಹಾರ, ಕಾಯಿಸೊಪ್ಪಿನಬೀದಿ, ಚಾಮುಂಡೇಶ್ವರಿ ದೇವಾಲಯದಲ್ಲಿ ಮಂಗಳಾರತಿ ಸ್ವೀಕರಿಸಿ ಗಾಂಧೀನಗರ, ಪೊಲೀಸ್ ಕ್ವಾಟ್ರಸ್, ಡಾ. ಬಿ.ಆರ್. ಅಂಬೇಡ್ಕರ್ ಕಾನಿ, ಶೆಟ್ಟಹಳ್ಳಿಬೀದಿ, ಎಂ.ಜಿ. ರಸ್ತೆ, ಹಳೇ ಬಿ.ಎಂ. ರಸ್ತೆ, ಟ್ರೂಫ್ಲೈನ್, ಅರ್ಕೇಶ್ವರ ಕಾಲನಿ, ನೇರಳೇಕೇರಿ, ಬಾಲಗೇರಿ ಮುಖಾಂತರ ಬುಧವಾರ ಬೆಳಗ್ಗೆ ದೇವಸ್ಥಾನದ ಬಳಿ ಬಂದು ಕರಗ ಹೊತ್ತ ಯೋಗೇಶ್ ಅಗ್ನಿಕೊಂಡ ಪ್ರವೇಶ ಮಾಡುತ್ತಾರೆ. ಕರಗ ಮೆರವಣಿಗೆಯಲ್ಲಿ ವೀರಮಕ್ಕಳು ಸೇರಿ ಸಾವಿರಾರು ಮಂದಿ ಭಾಗವಹಿಸಿ ದೇವಿಯ ಕರಗ ಮಹೋತ್ಸವವನ್ನು ಕಣ್ತ್ತುಂಬಿಕೊಳ್ಳುತ್ತಾರೆ.

ವಿಶೇಷ ಕಾರ್ಯಕ್ರಮ

ಜು. 16ರ ಮಂಗಳವಾರ ರಾತ್ರಿ ಕರಗ ಮೆರವಣಿಗೆಯಲ್ಲಿ ಸಾಗುತ್ತದೆ. ಜು.17ರ ಬುಧವಾರ ಬೆಳಗ್ಗೆ ಕರಗದಾರಕರಿಂದ ಅಗ್ನಿಕೊಂಡ ಪ್ರವೇಶ. ಜು.18ರ ಗುರುವಾರ ಮಧ್ಯಾಹ್ನ 12ರಿಂದ ಸಿಡಿ ಉತ್ಸವ ನಡೆಯಲಿದೆ. ಏ.19ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಭಕ್ತರಿಗೆ ದೇವಾಲಯದ ಆವರಣದಲ್ಲಿ ಬೃಹತ್ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net