ಕಾಂಗ್ರೆಸ್ ಸರ್ಕಾರದ ಖಜಾನೆ ದಿವಾಳಿ

FotoJet
Published on

ಚನ್ನಪಟ್ಟಣ: ನಿಖಿಲ್ಗೆ ಜನಪರ ಕಾಳಜಿ ಇದೆ. ಕ್ಷೇತ್ರದ ಜನತೆ ವಿಧಾನಸೌಧಕ್ಕೆ ಕಳಿಸಿ. ಆ ಹುಡುಗ ನಿಮ್ಮ ಪರವಾಗಿ ಧ್ವನಿ ಎತ್ತುತ್ತಾನೆ. ಈ ಬಗ್ಗೆ ಸಂಶಯ ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ನಾನು ರೈತನ ಮಗ, ನೀವು ರೈತರ ಮಕ್ಕಳು. ಇಗ್ಗಲೂರು ಅಣೆಕಟ್ಟು ಕಟ್ಟಿಸಿದ ದೇವೇಗೌಡ ಬದುಕಿದ್ದಾನೆ. ಹದಿನೇಳು ಕೆರೆಗಳಿಗೆ ನೀರು ಹರಿಸಿದ್ದ ವ್ಯಕ್ತಿಯನ್ನು ಭಗೀರಥ ಅಂತಾರೆ. ಈ ಅಣೆಕಟ್ಟು ಕಟ್ಟಿಲ್ಲ ಅಂದರೆ ನೀರು ಹರಿಸೋಕೆ ಸಾಧ್ಯ ಆಗುತ್ತಿತ್ತಾ?. ಕ್ಷೇತ್ರದ ಅಭಿವೃದ್ಧಿಗಾಗಿ ಕುಮಾರಸ್ವಾಮಿ ಸಾಕಷ್ಟು ಶ್ರಮಿಸಿದ್ದಾರೆ. ಅದು ಮುಂದುವರಿಯಲು ನಿಖಿಲ್ ಗೆಲ್ಲಿಸಿ ಎಂದರು.

ಚುನಾವಣೆಗಾಗಿ ಹಣ ಜಮೆ!

ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆ ದಿವಾಳಿ ಮಾಡಿದೆ.ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ಮಾಡಿದ್ದಾರೆ ಎಂದು ಎಚ್‌ಡಿಡಿ ಆರೋಪಿಸಿದರು.

ಚುನಾವಣೆ ಮುಗಿದ ಮೇಲೆ ಹಣ ಜಮೆ ಮಾಡುವುದನ್ನು ಮತ್ತೆ ನಿಲ್ಲಿಸುತ್ತಾರೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚೋಕೆ ಇವರ ಬಳಿ ಕಾಸಿಲ್ಲ ಎಂದು ಜನ ತ್ಯಗಳುತ್ತಿದ್ದಾರೆ ಎಂದು ಗುಡುಗಿದ ಅವರು, ಸರ್ಕಾರಕ್ಕೆ ಕ್ಷೇತ್ರದ ಜನತೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್!

ಕುಮಾರಸ್ವಾಮಿ ರಾಜೀನಾಮೆ ಕೊಟ್ಟ ಮೇಲೆ ಯಾರು ಅಭ್ಯರ್ಥಿಯಾಗಬೇಕು ಎಂದು ಚರ್ಚೆ ನಡೆಯಿತು. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು. ಹಾಗಂತಹ ಎಲ್ಲರನ್ನೂ ನಂಬಿಸಿದರು. ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಇದ್ದಕ್ಕಿದ್ದ ಹಾಗೆ ೀರ್ಮಾನ ಬದಲಾಯಿಸಿ ಮತ್ತೊಬ್ಬ ಸ್ನೇಹಿತರನ್ನು ನಿಲ್ಲಿಸಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಎಚ್‌ಡಿಡಿ ಟೀಕಿಸಿದರು. ನನ್ನ ಮೊಮ್ಮಗನ್ನು ವಿಧಾನಸಭೆಗೆ ಆಯ್ಕೆ ಮಾಡಿ ಆಶೀರ್ವಾದ ಮಾಡಿ. ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ನಮ್ಮ ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ನಿಖಿಲ್ನನ್ನು ವಿಧಾನಸೌಧಕ್ಕೆ ಹೋಗುವುದು 100ಕ್ಕೆ 100 ಸತ್ಯ ಎಂದರು.

ಬಿರುಸಿನ ಪ್ರಚಾರ!

ನಿಖಿಲ್ ಪರ ಭಾನುವಾರವೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬಿರುಸಿನ ಪ್ರಚಾರ ನಡೆಸಿದರು. ಸುಳ್ಳೇರಿ, ಅಕ್ಕೂರು, ಸೋಗಾಲ, ಹಾರೋಕೊಪ್ಪ, ಇಗ್ಗಲೂರುನಲ್ಲಿ ಮತಯಾಚನೆ ಮಾಡಿದರು. ಇದಕ್ಕೂ ಮೊದಲು ನಗರ ಅಖಿಲ್ ಷಾ ಖಾದ್ರಿ ದರ್ಗಾದ ಧರ್ಮಗುರು ಸಯ್ಯದ್ ಮಸನ್ ಷಾ ಖಾದ್ರಿಯವರ ನಿವಾಸಕ್ಕೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net