

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಸಾಮಾಜಿಕ ಭದ್ರತಾ ಯೋಜನೆಗಳಿಗೆ ಬ್ಯಾಂಕ್‌ಗಳು ಆದ್ಯತೆ ನೀಡಿದಾಗ ಸಮಾಜದ ಕೆಳಸ್ತರದವರಿಗೂ ಪ್ರಯೋಜನ ಲಭ್ಯವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಹೇಳಿದರು.
ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಬ್ಯಾಂಕಿಂಗ್ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನ್‌ಲೈನ್ ಹಣಕಾಸು ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಬ್ಯಾಂಕ್‌ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಬ್ಯಾಂಕಿಂಗ್ ಭದ್ರತೆ ಕುರಿತು ಕಾಸರಗೋಡು ಹೆಚ್ಚುವರಿ ಎಸ್.ಪಿ.ದೇವದಾಸ್ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ರೀಜನಲ್ ವ್ಯಾನೇಜರ್ ಆರ್.ಪಿ.ಶ್ರೀನಾಥ್, ಆರ್.ಬಿ.ಐ ಪ್ರತಿನಿಧಿ ಟಿ.ಕೆ. ಶ್ರೀಕಾಂತ್ ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ತಿಪ್ಪೇಶ್ ಸ್ವಾಗತಿಸಿದರು. ಹಣಕಾಸು ಸಾಕ್ಷರತಾ ಕೌನ್ಸೆಲರ್ ಅಶೋಕ್ ವಂದಿಸಿದರು.
ಬ್ಯಾಂಕಿಂಗ್ ವಹಿವಾಟು ಮಾಹಿತಿ
ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕಿಂಗ್ ವಹಿವಾಟುಗಳ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ 8462.93 ಕೋಟಿ ರೂ., ಸಾಲ ಮೊತ್ತ 16665.09 ಕೋಟಿ ರೂ., ಜಿಲ್ಲೆಯ ಸಾಲದ ಠೇವಣಿ ಅನುಪಾತ ಶೇ.90.26ರಷ್ಟಿದೆ. 3662.15 ಕೋಟಿ ರೂ. ಸಾಲ ವಿತರಿಸಿದ್ದು, ಕೃಷಿ ಸಾಲದ ಗುರಿ 7900 ಕೋಟಿ ರೂ.ಗಳಲ್ಲಿ 1938 ಕೋಟಿ ರೂ. ಸಾಧಿಸಿವೆ. ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದಲ್ಲಿ 2053 ಕೋಟಿ ರೂ.ಗಳ ಗುರಿಯಲ್ಲಿ 633 ಕೋಟಿ ರೂ. ತಲುಪಲಾಗಿದೆ. ವಸತಿ ಮತ್ತು ಶಿಕ್ಷಣ ಸೇರಿದಂತೆ ತೃತೀಯ ವಲಯದಲ್ಲಿ 547 ಕೋಟಿ ರೂ.ಗಳ ಗುರಿಯಲ್ಲಿ 130 ಕೋಟಿ ರೂ. ಸಾಧಿಸಲಾಗಿದೆ. ಆದ್ಯತಾ ವರ್ಗದಲ್ಲಿ 10500 ಕೋಟಿ ರೂ. ಗುರಿಯಲ್ಲಿ 2702 ಕೋಟಿ ರೂ. ಸಾಧಿಸಲಾಗಿದೆ.