

ಕಾರವಾರ: ಸಾರ್ವಜನಿಕರು ಆನ್‌ಲೈನ್ ವಂಚನೆಗೆ ಒಳಗಾಗುತ್ತಿರುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಆದರೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ಬ್ಯಾಂಕ್ ಮ್ಯಾನೇಜರ್ ಆನ್‌ಲೈನ್ ಹೂಡಿಕೆ ಮೂಲಕ ಹಣ ದ್ವಿಗುಣ ಮಾಡಿಕೊಳ್ಳುವ ಆಸೆಯಲ್ಲಿ 15.53 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಕಾರವಾರದ ಯುಕೋ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಯು ಟ್ಯೂಬ್‌ನಲ್ಲಿ ಆನ್‌ಲೈನ್ ಟ್ರೇಡಿಂಗ್ ಜಾಬ್ ಮಾಡಲು ಹೋಗಿ ಹಣ ಕಳೆದುಕೊಂಡಿದ್ದಾರೆ. ಯು ಟ್ಯೂಬ್‌ನಲ್ಲಿ ದೊರೆತ ಮೊಬೈಲ್ ನಂಬರ್ ಆಧರಿಸಿ ಅವರು ವ್ಯಾಟ್ಸ್ಆ್ಯಪ್ ಗ್ರೂಪ್ ಪ್ರಾರಂಭಿಸಿದ್ದರು. ಆ ಗ್ರೂಪ್‌ನಲ್ಲಿರುವ 7826536999 2825962885 ಹಾಗೂ 7417555325 ಸಂಖ್ಯೆಯ ಅಡ್ಮಿನ್‌ಗಳು ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಮ್ಯಾನೇಜರ್‌ಗೆ ಮೊದಲು ಶೇ.5, ನಂತರ ಶೇ.10 ಹಾಗೂ ನಂತರ 15 ರಷ್ಟು ಕಮೀಷನ್ ನೀಡುವ ಭರವಸೆ ನೀಡಿದ್ದರು.
ಅದನ್ನು ನಂಬಿದ ಮ್ಯಾನೇಜರ್ 20 ಸಾವಿರದಂತೆ ಹಲವು ಹಂತದಲ್ಲಿ ಹೂಡಿಕೆ ಮಾಡಿದ್ದರು. ಆದರೆ, ಕೊನೆಗೆ ಹೂಡಿಕೆ ಮಾಡಿದ ಹಣವನ್ನೂ ನೀಡದೇ ಕಮೀಷನ್ ಸಹ ನೀಡದೇ ಮೋಸ ಮಾಡಲಾಗಿದೆ ಎಂದು ಅವರು ನಗರದ ಸಿಇಎನ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.