

ಶಿರಸಿ: ನಗರದ ಪ್ರತಿಷ್ಠಿತಿ ಅಡಕೆ ವಹಿವಾಟು ಸಂಸ್ಥೆ ಟಿಎಸ್‌ಎಸ್ ನಲ್ಲಿ ಹಿಂದಿನ ಆಡಳಿತ ಮಂಡಳಿ ಮತ್ತು ಕೆಲ ಸಿಬ್ಬಂದಿಗಳ ಮೇಲೆ 100 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಮಾರುಕಟ್ಟೆ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಸಂಸ್ಥೆಯ ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ, ವ್ಯವಸ್ಥಾಪಕ ರವೀಶ ಹೆಗಡೆ, ಮಾಜಿ ಉದ್ಯೋಗಿ ಅನಿಲ ಮುಷ್ಠಗಿ, ಪ್ರವೀಣ ಹೆಗಡೆ ಮತ್ತು ಮಹಾಬಲೇಶ್ವರ ಹೆಗಡೆ ಎಂಬವರ ಮೇಲೆ ಸಂಸ್ಥೆಯ ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಭಟ್ ದೂರು ನೀಡಿದ್ದಾರೆ. ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಈಗಾಗಲೇ ಈ ಕೆಲವರ ಮೇಲೆ 5 ದೂರುಗಳು ದಾಖಲಾಗಿದ್ದವು. ಈಗ ಸಂಸ್ಥೆಯಿAದ ಆರನೇ ದೂರು ದಾಖಲಾದಂತಾಗಿದೆ.
2020ರ ಮೇ 5ರಿಂದ 2024ರ ಮೇ 15ದರ ಅವಧಿಯಲ್ಲಿ ಅನಿಲಕುಮಾರ ಮುಷ್ಠಗಿ ಹೆಸರಿನಲ್ಲಿ 44.09 ಕೋಟಿ ರೂ., ಪ್ರವೀಣ ಹೆಗಡೆ ಅವರ ಹೆಸರಿನಲ್ಲಿ 33.66 ಕೋಟಿ ರೂ., ಮಹಾಬಲೇಶ್ವರ ಹೆಗಡೆ ಅವರ ಹೆಸರಿನಲ್ಲಿ 22.88 ಕೋಟಿ ರೂ., ಸಾಲ ನೀಡಲಾಗಿದೆ. ಗರಿಷ್ಠ ಮಿತಿ, ಸೂಕ್ತ ಭದ್ರತೆ ನಿಯಮಗಳನ್ನು ನಿರ್ಲಕ್ಷಿö್ಯಸಿ ಈ ಸಾಲ ನೀಡಲಾಗಿದೆ. ದೊಡ್ಡ ಮೊತ್ತದ ಸಾಲ ನೀಡುವಾಗ ಯಾವುದೇ ಆಸ್ತಿ ಮೌಲ್ಯಮಾಪನ ಅಥವಾ ಕಾನೂನು ಸಲಹೆ ಪಡೆಯದೇ ಸಾಲ ನೀಡಿದ್ದಾರೆ. ಇದರಿಂದಾಗಿ ಸಂಸ್ಥೆಯಲ್ಲಿ 100 ಕೋಟಿ ರೂ.ಗೂ ಅಧಿಕ ಅವ್ಯವಹಾರವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೂ.4ರಂದು ಈ ದೂರು ಸಲ್ಲಿಕೆಯಾಗಿದೆ.
ಅಡಕೆ ಬೆಳೆಗಾರರ ಪ್ರಮುಖ ಮಾರುಕಟ್ಟೆ ಸಂಸ್ಥೆಯಾದ ಟಿಎಸ್‌ಎಸ್ ನಲ್ಲಿ ಕಳೆದ ಕೆಲ ತಿಂಗಳಿನಿಂದ ಹೊಸ ಮ್ತತು ಹಳೇ ಆಡಳಿತ ಮಂಡಳಿ ಮಧ್ಯೆ ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ. ಗೋಪಾಲಕೃಷ್ಣ ವೈದ್ಯ ನೇತೃತ್ವದ ಹೊಸ ಆಡಳಿತ ಮಂಡಳಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಆಡಳಿತ ವಹಿಸಿಕೊಂಡಿದ್ದು, ಸಂಸ್ಥೆಯಲ್ಲಿ ಕಳೆದ ನಾಲ್ಕಾರು ತಿಂಗಳಿಂದ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಈ ಕುರಿತಂತೆ ಸಂಸ್ಥೆಯ ಮಾಜಿ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ, ಮಾಜಿ ಸಿಬ್ಬಂದಿ ಅನಿಲ ಮುಷ್ಠಗಿ ಸೇರಿದಂತೆ ಇತರರ ಮೇಲೆ ಜಾಗ ಖರೀದಿಯಲ್ಲಾದ ಲೋಪ, ಸಂಸ್ಥೆಯ ವಾಹನ ಖರೀದಿಯಲ್ಲಾದ ಲೋಪ ಕುರಿತಂತೆ ವಿವಿಧ ಪ್ರಕರಣಕ್ಕೆ ಸಂಬಂಧಿಸಿ 5 ಪೊಲೀಸ್ ದೂರು ದಾಖಲಿಸಿದ್ದರು.
ಆದರೆ, ಕಳೆದ ಎರಡು ವಾರದ ಹಿಂದೆ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ಸರಿಯಾಗಿ ನಡೆದಿಲ್ಲ ಎಂಬ ಆರೋಪದಲ್ಲಿ ಉಪನಿಬಂಧಕ ಮಂಜುನಾಥ ಸಿಂಗ್ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶಿದ್ದರು. ಬಳಿಕ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ಸಿಕ್ಕಿ, ಹಾಲಿ ಆಡಳಿತ ಮಂಡಳಿ ಪುನಃ ಅಧಿಕಾರ ನಡೆಸುತ್ತಿದೆ. ಸದಸ್ಯರಾದ ಶ್ರೀಪಾದ ಹೆಗಡೆ ಕಡವೆ ಸೇರಿದಂತೆ ಕೆಲವರು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರ ಮೇಲೆ 600 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸದಸ್ಯರ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಿದ್ದಾರೆ. ಈ ನಡುವೆ ಸಂಸ್ಥೆಯ ಹಳೆಯ ಆಡಳಿತ ಮಂಡಳಿ, ಕೆಲ ಸಿಬ್ಬಂದಿಗಳ ಮೇಲೆ 6 ನೇ ಪೊಲೀಸ್ ದೂರು ದಾಖಲಾಗಿದೆ.