

ಮದ್ದೂರು: ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ನೀಡುವ ಬಡ್ಡಿ ರಹಿತ ಸಾಲವನ್ನು ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಪಡೆದು ಮಹಿಳೆಯರು ಆರ್ಥಿಕವಾಗಿ ಸದೃಢವಾಗಬೇಕೆಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ತಿಳಿಸಿದರು.
ತಾಲೂಕಿನ ಬೆಸಗರಹಳ್ಳಿಯಲ್ಲಿ ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯಲ್ಲಿ ನಬಾರ್ಡ್ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಸಹಕಾರ ಬ್ಯಾಂಕ್ ಮಹಿಳೆಯರಿಗೆ, ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆ. ಕ್ಷೀರ ಸಮೃದ್ಧಿ ಯೋಜನೆಯಡಿ ಹಸುಗಳನ್ನು ಖರೀದಿಸಲು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣಗಳ ಮೇಲೆ ಸಾಲ ನೀಡುತ್ತಿದೆ. ಇದರ ಸದ್ಬಳಕೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೆಸಗರಹಳ್ಳಿ ವ್ಯಾಪ್ತಿಯ 18 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸುಮಾರು 1.10 ಕೋಟಿ ರೂ.ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಹಿಳೆಯರಿಗೆ ಹೇಳಿದರು.
ಬೆಸಗರಹಳ್ಳಿ ಸಹಕಾರ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸತೀಶ್, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸಂಘಟಕರಾದ ಶಿವಕುಮಾರ್, ಸುಮತಿ, ವೃತ್ತ ಮೇಲ್ವಿಚಾರಕರಾದ ರವಿ, ಹರೀಶ್ ಇದ್ದರು.