

ಬೆಂಗಳೂರು: ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತಾ ರಾಷ್ಟ್ರೀಯ ಭಾವೈಕ್ಯತೆಗೆ ಗಮನಾರ್ಹವಾದ ಕೊಡುಗೆ ನೀಡುತ್ತಿರುವ ಅಲೆಮಾರಿ ಸಮುದಾಯ ಬಂಜಾರ ಸಂಸ್ಕೃತಿ ಮತ್ತು ಕಲೆ ದೇಶದಲ್ಲಿಯೇ ವಿಶಿಷ್ಟವಾದುದು ಎಂದು ಜಾನಪದ ವಿವಿ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.
ಸರಕಾರಿ ಕಲಾ ಕಾಲೇಜಿನ ಕನ್ನಡ ಸಂಘ ಮತ್ತು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಂಜಾರ ಕಸೂತಿ ಕಲಿಕೆ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಉಡುಗೆ ತೊಡುಗೆಯಿಂದ ಆಕರ್ಷಿಸುವ ಬಂಜಾರ ಸಮುದಾಯ, ಮಧ್ಯ ಏಷ್ಯಾದಿಂದ ವಲಸೆ ಬಂದು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿದ್ದಾರೆ. ನಾನಾ ಕುಶಲ ಕಲೆಗಳಲ್ಲಿ ನಿಷ್ಣಾತರಾದ ಇವರು ಸ್ಥಳೀಯರೊಂದಿಗೆ ಬೆರೆತೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಗೋವಿಂದಸ್ವಾಮಿ ಮಾತನಾಡಿ, ‘‘ಗಾದೆ, ನುಡಿಗಟ್ಟು, ಶಾಸ, ನಂಬಿಕೆ, ಮಾಟ, ಕಣಿ, ಬೇಟೆ ಹೀಗೆ ಹಲವು ವೈವಿಧ್ಯಗಳಿಂದ ಕೂಡಿರುವ ಬಂಜಾರ ಸಮುದಾಯವು ಹಾಡು, ನತ್ಯ, ಕಸೂತಿ, ಹಚ್ಚೆ, ತೊಗಲುಗೊಂಬೆಯಂಥ ಕಲೆಗಳನ್ನೂ ಹೊಂದಿದೆ. ಸ್ವಾತಂತ್ರ್ತ್ರ್ಯಾನಂತರದಲ್ಲಿ ದೊರಕಿದ ಅವಕಾಶಗಳನ್ನು ಬಳಸಿಕೊಂಡು ಸಮುದಾಯದವರು ಶಿಕ್ಷಿತರಾಗುತ್ತಿದ್ದಾರೆ. ಇವರ ನ್ಯಾಯ ಪಂಚಾಯತಿಯ ಕೆಲವು ಅಂಶಗಳನ್ನು ನ್ಯಾಯಾಂಗದಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಅಕಾಡೆಮಿಯದ್ದಾಗಿದೆ ಎಂದು ತಿಳಿಸಿದರು.
ರಂಗಕರ್ಮಿ ಮತ್ತು ವಸ ವಿನ್ಯಾಸಕಿ ಎನ್. ಮಂಗಳ, ನಮ್ಮ ಪರಂಪರೆಯಿಂದ ಬಂದ ಹಲವಾರು ಕಲೆಗಳು ಆಧುನಿಕ ಕಾಲದಲ್ಲಿ ಹೊಸ ರೂಪವನ್ನು ಪಡೆಯುತ್ತಿವೆ. ಸಂಚಿ ಚೀಲವು ಇಂದು ಮೊಬೈಲ್ ಚೀಲವಾಗಿದೆ. ಅಲ್ಲದೆ ನಮ್ಮ ಪಾರಂಪರಿಕ ಕಸೂತಿ ಕಲೆಗೆ, ಹಚ್ಚೆಗೆ, ಹಾಡು, ನೃತ್ಯ ಹಾಗೂ ಸಾಂಪ್ರದಾಯಿಕ ಉಡುಗೆ - ತೊಡುಗೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇವುಗಳನ್ನು ಕೆಲವರು ತಮ್ಮ ವ್ಯಾವಹಾರಿಕತೆಗೆ ಬಳಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಬಂಜಾರ ಅಕಾಡೆಮಿ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಟಿ. ಶ್ರೀನಿವಾಸ ನಾಯಕ, ಜಾನಪದ ವಿವಿ ಪ್ರಾಧ್ಯಾಪಕ ಡಾ. ಮಾನ್ಪಡೆ, ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ಮತ್ತಿತರರು ಪಾಲ್ಗೊಂಡಿದ್ದರು.