ಬೆಂಗಳೂರು- ವಿಯೆಟ್ನಾಂ ನೇರ ವಿಮಾನಯಾನ: ವಿಯೆಟ್​ಜೆಟ್​ನಿಂದ ಅಗ್ಗದ ದರದಲ್ಲಿ ಸೇವೆ! Vietjet

Vietjet
Published on

Vietjet : ಪ್ರವಾಸಿಗರ ಸ್ವರ್ಗ ವಿಯೆಟ್ನಾಂಗೆ ತೆರಳಲು ಕನ್ನಡಿಗರು ಇನ್ನು ಪರದಾಡ ಬೇಕಿಲ್ಲ. ಅಂತಾರಾಷ್ಟ್ರೀಯ ಏರ್​ಲೈನ್ಸ್ ಸಂಸ್ಥೆ ವಿಯೆಟ್​ಜೆಟ್ ಇದೀಗ ಬೆಂಗಳೂರಿನಿಂದ ನೇರ ವಿಮಾನಯಾನ ಆರಂಭಿಸಿದೆ.

Vietjet 1

ವಿಯೆಟ್​ಜೆಟ್ ಏರ್​ಲೈನ್ಸ್ ತನ್ನ ಅಂತಾರಾಷ್ಟ್ರೀಯ ಮಾರ್ಗಗಳನ್ನು ವಿಸ್ತರಿಸುತ್ತಿದ್ದು ಬೆಂಗಳೂರು ಮತ್ತು ಹೈದರಾಬಾದ್​ನಿಂದ ಹೊ ಚಿ ಮಿನ್ ಸಿಟಿಗೆ ನೇರ ಸಂಪರ್ಕ ಕಲ್ಪಿಸಿದೆ. ಆರಂಭಿಕ ರಿಯಾಯಿತಿ ಆಫರ್​ಗಳ ಫಲವಾಗಿ ಕಡಿಮೆ ದರದಲ್ಲಿ ವಿಯೆಟ್ನಾಂಗೆ ತೆರಳಬಹುದಾಗಿದೆ. ಈ ಮೊದಲು ವಿಯೆಟ್ನಾಂ ಪ್ರವಾಸ ಹೋಗಲೇ ಬೇಕೆನ್ನುವವರು ಬೇರೆ ಬೇರೆ ನಗರಗಳಿಂದ ದುಬಾರಿ ಟಿಕೆಟ್ ಪಡೆದು ಪ್ರಯಾಣಿಸಬೇಕಿತ್ತು.

ಪ್ರಪಂಚದ ಸುರಕ್ಷಿತ ರಾಷ್ಟ್ರಗಳಲ್ಲಿ ಒಂದಾದ ವಿಯೆಟ್ನಾಂಗೆ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ನಮ್ಮ ಕರ್ನಾಟಕ ಕರಾವಳಿಯ ವಾತಾವರಣ ಅಲ್ಲಿರುವ ಕಾರಣ ಕನ್ನಡಿಗರೂ ಆಕರ್ಷಿತರಾಗುತ್ತಿದ್ದಾರೆ. ನಮ್ಮ ರೂಪಾಯಿಗೆ ಹೋಲಿಕೆ ಮಾಡಿದರೆ ವಿಯೆಟ್ನಾಂ ಹಣದ ಮೌಲ್ಯ ತೀರಾ ಕುಸಿದಿದ್ದು ನಮ್ಮ ಒಂದು ರೂಪಾಯಿ ಅಲ್ಲಿನ 300 ವಿಯೆಟ್ನಾಂ ಡಾಂಗ್​ಗೆ ಸಮವಾಗಿದೆ. ಇತರ ದೇಶಗಳಿಗಿಂತ ವಿಯೆಟ್ನಾಂ ಕಡಿಮೆ ಖರ್ಚಿನ ದೇಶವೆಂಬ ಹೆಗ್ಗಳಿಕೆ ಹೊಂದಿರುವುದು ವಿಶೇಷ.

Vietjet 2

ಐದು ಲಕ್ಷ ಪ್ರವಾಸಿಗರ ಭೇಟಿ: 2024ರಲ್ಲಿ ಸುಮಾರು 5.01 ಲಕ್ಷ ಭಾರತೀಯ ಪ್ರವಾಸಿಗರು ವಿಯೆಟ್ನಾಂಗೆ ಭೇಟಿ ನೀಡಿದ್ದು, ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 2.6 ಪಟ್ಟು ಹೆಚ್ಚಳವಾಗಿದೆ.

ವಿಯೆಟ್​ಜೆಟ್​ನ ಈ ಎರಡು ಹೊಸ ಮಾರ್ಗಗಳು ಭಾರತ-ವಿಯೆಟ್ನಾಂ ನಡುವಿನ ಒಟ್ಟು ಮಾರ್ಗಗಳನ್ನು 10ಕ್ಕೆ ಮತ್ತು ವಾರದ 78 ವಿಮಾನಗಳಿಗೆ ಹೆಚ್ಚಿಸಲಿದೆ. ನವದೆಹಲಿ, ಮುಂಬೈ, ಅಹಮದಾಬಾದ್, ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಮುಂತಾದ ಪ್ರಮುಖ ಭಾರತೀಯ ನಗರಗಳನ್ನು ವಿಯೆಟ್ನಾಂನ ಹೊ ಚಿ ಮಿನ್ ಸಿಟಿ, ಹನೋಯ್ ಮತ್ತು ಡಾ ನಾಂಗ್​ನೊಂದಿಗೆ ಸಂರ್ಪಸುತ್ತದೆ. ವಿಯೆಟ್ನಾಂ ಮೂಲಕ ಆಸ್ಟ್ರೇಲಿಯಾ, ಬಾಲಿ, ಕೌಲಾಲಂಪುರ, ಸಿಂಗಾಪುರ ಮುಂತಾದ ಸ್ಥಳಗಳಿಗೆ ಸುಲಭ ಸಂಪರ್ಕವಿರುವ ಕಾರಣ ದಿಂದ ಭಾರತೀಯ ಪ್ರವಾಸಿಗರಲ್ಲಿ ವಿಯೆಟ್ನಾಂನ ಆಕರ್ಷಣೆ ದಿನೇದಿನೇ ಹೆಚ್ಚುತ್ತಿದೆ.

ವಾರದಲ್ಲಿ ಮೂರು ದಿನ ಸಂಚಾರ

ಬೆಂಗಳೂರಿನಿಂದ ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರ ವಿಯೆಟ್​ಜೆಟ್ ವಿಮಾನಯಾನ ಸೌಲಭ್ಯ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಹೊ ಚಿ ಮಿನ್ ಸಿಟಿಯಿಂದ ಸಂಜೆ 7.10ಕ್ಕೆ ವಿಮಾನ ಹೊರಟು, ರಾತ್ರಿ 10.30ಕ್ಕೆ ಬೆಂಗಳೂರು ತಲುಪಲಿದೆ. ಮರುದಿನ, ಬೆಂಗಳೂರಿನಿಂದ ರಾತ್ರಿ 11.30ಕ್ಕೆ ಹೊರಟು, ಬೆಳಗ್ಗೆ 5.55ಕ್ಕೆ ಹೊ ಚಿ ಮಿನ್ ಸಿಟಿಗೆ ತಲುಪಲಿದೆ. ಹೊಸ ವಿಮಾನಯಾನ ಸೌಲಭ್ಯ ಉಭಯ ದೇಶಗಳ ನಡುವಣ ಆರ್ಥಿಕ ವ್ಯವಹಾರ ಹೆಚ್ಚಳಕ್ಕೂ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net