ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ, ಪದವಿ ಪ್ರದಾನ

VV
Published on

ಬೆಂಗಳೂರು: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಎನ್​ಇಪಿ-2020 ಅತ್ಯುತ್ತಮ ಬದಲಾವಣೆಯಾಗಿದೆ. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ವಿವಿಧ ವಿಷಯಗಳನ್ನು ಅಧ್ಯಯನ ನಡೆಸಲು ಸಾಧ್ಯವಾಗಿದೆ ಎಂದು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಉಪಾಧ್ಯ ಮತ್ತು ಸಮಾಜ ವಿಜ್ಞಾನ ಸಂಶೋಧನೆಯ ಭಾರತೀಯ ಪರಿಷತ್​ನ ಅಧ್ಯಕ್ಷ ಪೊ. ದೀಪಕ್​ಕುಮಾರ್​ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗವು ದೇಶದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಮಲ್ಟಿಪಲ್​ ಎಂಟ್ರಿ, ಎಕ್ಸಿಟ್​ ಮತ್ತು ಸ್ವಯಂಚಾಲಿತ ಪರ್ಮನೆಂಟ್​ ಅಕಾಡೆಮಿಕ್​ ಅಕೌಂಟ್​ ರಿಜಿಸ್ಟ್ರಿ (ಎಪಿಎಎಆರ್)ಯಂತಹ ವಿದ್ಯಾರ್ಥಿಸ್ನೇಹಿ ಅವಕಾಶಗಳನ್ನು ನೀಡಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್​ ಮತ್ತು ಗಣಿತ(ಸ್ಟೆಮ್​)ದಲ್ಲಿ ದಾಖಲಾತಿ ಹೆಚ್ಚಿಸಲು ವಿದ್ಯಾಶಕ್ತಿ ಯೋಜನೆ ಜಾರಿಗೊಳಿಸಿದ್ದು, ಎರಡು ವರ್ಷಗಳಲ್ಲಿ 10 ಸಾವಿರ ಗ್ರಾಮೀಣ ಸಂವಹನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಸ್ಮಿತಾ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಭಾರತದ 22 ಭಾಷೆಗಳಲ್ಲಿ 22 ಸಾವಿರ ಪುಸ್ತಕಗಳನ್ನು ಪ್ರಕಟಿಸುವ ಗುರಿಯನ್ನು ಯುಜಿಸಿ ಹೊಂದಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್​ ಮಾತನಾಡಿ, ಸರ್ಕಾರಿ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್​ಇಪಿ) ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದರು.

ಯುಜಿಸಿ ಉಪಾಧ್ಯಕ್ಷ ಪ್ರೊ.ದೀಪಕ್​ಕುಮಾರ್​ ಶ್ರೀವಾಸ್ತವ ಮುಂದೆಯೇ ಅಭಿಪ್ರಾಯ ಮಂಡಿಸಿದ ಸಚಿವರು, ಕರ್ನಾಟಕದಲ್ಲಿ 440 ಪದವಿ ಕಾಲೇಜುಗಳಿವೆ. ಈ ಪೈಕಿ 132 ಕಾಲೇಜುಗಳಲ್ಲಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಪದವಿ ತರಗತಿಗಳು ನಡೆಯುತ್ತಿವೆ. ಇಂತಹ ಪರಿಸ್ಥಿಯಲ್ಲಿ ಎನ್​ಇಪಿ ಅನುಷ್ಠಾನ ಕಷ್ಟಸಾಧ್ಯ. ರಾಜ್ಯದಲ್ಲಿ 12 ಸಾವಿರ ಅತಿಥಿ ಶಿಕ್ಷಕರು ಹಾಗೂ 14 ಸಾವಿರ ತಾಂತ್ರಿಕ ವಿಷಯಗಳ ಬೋಧಕರು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಇಂತಹ ಕಾಲೇಜುಗಳಲ್ಲಿ ಎಐನಂತಹ ತಾಂತ್ರಿಕ ವಿಷಯ ಓಪನ್​ ಎಲೆಕ್ಟಿವ್​ ಆಗಿ ಕಲಿಯಬಹುದು ಎಂದರೆ ಸಾಧ್ಯವಿಲ್ಲ. ಎಲ್ಲ ಕಾಲೇಜುಗಳಿಗೆ ಎಲ್ಲ ವಿಷಯಗಳ ಉಪನ್ಯಾಸರ ನಿಯೋಜನೆಯೂ ಸವಾಲಿನಿಂದ ಕೂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಎನ್​ಇಪಿ ಅನುಷ್ಠಾನ ಕಷ್ಟವಾಗುತ್ತಿದೆ ಎಂದರೆ, ಉಳಿದ ರಾಜ್ಯಗಳ ಕಥೆಯೇನು? ಎಂದು ಕಳವಳ ವ್ಯಕ್ತಪಡಿಸಿದರು.

ಒಂದೇ ಸಂಸ್ಥೆಯಲ್ಲಿ ಅಥವಾ ಆವರಣದಲ್ಲಿ ಎಲ್ಲ ರೀತಿಯ ಕೋರ್ಸ್​ಗಳಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎನ್​ಇಪಿ ಜಾರಿ ಸಾಧ್ಯವಾಗಬಹುದು. ಆದರೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಧ್ಯವಿಲ್ಲ. ಜತೆಗೆ ಮಲ್ಟಿ ಎಂಟ್ರಿ ಮತ್ತು ಎಕ್ಸಿಟ್​ ಬಗ್ಗೆಯು ಸಾಕಷ್ಟು ಗೊಂದಲಗಳಿವೆ. ಈ ಬಗ್ಗೆಯೂ ಚರ್ಚೆಯಾಗಬೇಕು ಎನ್ನುತ್ತಾ, "ನಾವು ವಾಸ್ತವ ಹೇಳುತ್ತಿದ್ದೇವೆ. ನೀವು ಈ ಆಯಾಮದಲ್ಲಿಯೂ ಯೋಚಿಸಿ ನೋಡಬೇಕು. ಅನ್ಯತಾ ಭಾವಿಸಬಾರದು'ಎಂದು ಮನವಿ ಮಾಡಿದರು. ಪ್ರೊ.ದೀಪಕ್​ ಕುಮಾರ್​ ಶ್ರೀವಾಸ್ತವ ನಗುಮುಖದಲ್ಲಿಯೇ ಸುಧಾಕರ್​ ಮಾತುಗಳನ್ನು ಆಲಿಸಿದರು.

ಕುಲಪತಿ ಡಾ.ಎಸ್​.ಎಂ.ಜಯಕರ ವಿಶ್ವವಿದ್ಯಾಲಯದ ಚಟುವಟಿಕೆಗಳ ವರದಿ ಮಂಡಿಸಿದರು. ಕುಲಸಚಿವ ಶೇಕ್​ ಲತೀಫ್, ಮೌಲ್ಯಮಾಪನ ಕುಲಸಚಿವ ಡಾ.ಸಿ.ಶ್ರೀನಿವಾಸ್​ ಮತ್ತು ಸಿಂಡಿಕೇಟ್​ ಸದಸ್ಯರು, ಡೀನ್​ಗಳು ಇದ್ದರು.

ಅನುರಾಧಾಗೆ 9 ಚಿನ್ನದ ಪದಕ

ಸ್ನಾತಕೋತ್ತರ ಪದವಿಯ ರಸಾಯನ ಶಾಸ ವಿಭಾಗದ ಎಸ್​. ಅನ್ನಪೂರ್ಣ ಒಟ್ಟು 9 ಚಿನ್ನದ ಪದಕ ಪಡೆದು, ಅತಿಹೆಚ್ಚು ಪದಕ ಗಳಿಸಿದ ಕೀರ್ತಿಗೆ ಭಾಜನರಾದರು. ಸ್ನಾತಕ ಪದವಿ ವಿಭಾಗದಲ್ಲಿ ಎಂ.ಅನುರಾಧ 9 ಚಿನ್ನದ ಪದಕ ಗಳಿಸಿದ್ದಾರೆ. ಜೆ.ರಮ್ಯ, ಎಂ.ಪಿ.ರಮ್ಯ, ವೈ.ಬಿ.ವಿಶಾಲಾ ಪರಿಷಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಬಾಬಾ ಸಾಹೇಬ ಡಾ.ಬಿ.ಆರ್​.ಅಂಬೇಡ್ಕರ್​ ಚಿನ್ನದ ಪದಕ ಪಡೆದಿದ್ದಾರೆ. 140 ಅಭ್ಯರ್ಥಿಗಳು ಪಿಎಚ್.ಡಿ ಪದವಿ ಪಡೆದುಕೊಂಡರು.

ವಿಶ್ವೇಶ್ವರಯ್ಯ ವಿವಿಗೆ 100 ಕೋಟಿ ರೂ. ಮೀಸಲು

ಪ್ರತ್ಯೇಕ ಸ್ಥಾನಮಾನ ಪಡೆದಿರುವ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಅತ್ಯುತ್ತಮ ಇಂಜಿನಿಯರಿಂಗ್​ ಕಾಲೇಜು ಮಾಡಬೇಕು ಎಂಬ ಉದ್ದೇಶವಿದೆ. ಇದಕ್ಕಾಗಿ ಈಗಾಗಲೇ ಬಜೆಟ್​ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ. ಜ್ಞಾನಭಾರತಿ ಆವರಣದ 50 ಎಕರೆ ಪ್ರದೇಶದಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಸೌಕರ್ಯ ಒಳಗೊಂಡ ಕಟ್ಟಡ ನಿರ್ಮಿಸಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಡಾ.ಎಂ.ಸಿ.ಸುಧಾಕರ್​ ಭರವಸೆ ನೀಡಿದ್ದಾರೆ.

ಇಬ್ಬರಿಗೆ ಡಾ.ಲಿಟ್​ ಪದವಿ

ಸಿನಿಮಾ ಕ್ಷೇತ್ರದ ಸಾಧನೆಗಾಗಿ ಸಂಗೀತ ನಿರ್ದೇಶಕ ಗುರುಕಿರಣ್​ ಮತ್ತು ಕ್ರೀಡೆ, ಸಮಾಜ ಸೇವೆ ಮತ್ತು ವಿಕಲ ಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೆ.ಎಸ್​.ರಾಜಣ್ಣ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net