

ತುಮಕೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬುಧವರಾ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಯುಗಾದಿ ಹೊಸ ವರ್ಷದ ಮೊದಲ ದಿನವಾದ ಬುಧವಾರ ಶ್ರೀಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದು ಸಂಪ್ರದಾಯದಂತೆ ಗುರು-ಹಿರಿಯರ ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ಬಂದಿದ್ದೇನೆ. ಬೆಳಗ್ಗೆ ಆದಿಚುಂಚನಗಿರಿ ಮಠಕ್ಕೆ ತೆರಳಿ ಡಾ.ನಿರ್ಮಾಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದೇನೆ ಎಂದರು.
ಬಡವರಿಗೆ ಬ್ಯಾಂಕ್ ಅಕೌಂಟ್: ಬ್ಯಾಂಕುಗಳು ಅಂದರೆ ಶ್ರೀಮಂತರ ಸ್ವತ್ತು ಅನ್ನುವುದನ್ನು ಬದಲಾಯಿಸಿ, ದೇಶದಲ್ಲಿ ಬಡವರಿಗೆ ಮೊದಲ ಬಾರಿ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಇನ್ನೂ ವಿಮೆ ಸೌಲಭ್ಯವನ್ನು ಸಹ ಬಡವರಿಗೆ ಕಲ್ಪಿಸಿ ಕೊಟ್ಟ ಮೋದಿ, ಬ್ಯಾಂಕುಗಳು ಬಡವರಿಗೆ ಸಾಲ ಸೌಲಭ್ಯಗಳನ್ನು ಕೊಡುವಂತೆ ಕಟ್ಟುನಿಟ್ಟಾಗಿ ಜಾರಿತಂದರು. ಕಳೆದ ಹತ್ತು ವರ್ಷದಲ್ಲಿ ಸುಮಾರು 26 ಕೋಟಿ ಜನ ಬಡತನದಿಂದ ಮುಕ್ತಿ ಹೊಂದಿದ್ದು ಬಡವರ ಕಲ್ಯಾಣವಾಗಿದೆ. ಇಡೀ ದೇಶದಲ್ಲಿ ನರೇಂದ್ರ ಮೋದಿ ಪರವಾದ ದೊಡ್ಡ ಅಲೆ ಇದೆ ಎಂದರು.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ 12 ಕೋಟಿ ಮಹಿಳೆಯರಿಗೆ ಶೌಚಾಗೃಹ ಕಟ್ಟಿಸಿ ಕೊಡಲಾಗಿದೆ. 4.30 ಕೋಟಿ ಬಡವರಿಗೆ ಸೂರು ಒದಗಿಸಲಾಗಿದೆ. ಸುಮಾರು 10 ಕೋಟಿ ಅಡುಗೆ ಅನಿಲ ಸಂಪರ್ಕ, ಮನೆಮನೆಗೂ ನಲ್ಲಿ ನೀರು ಬರುವಂತೆ ಮಾಡಿದ್ದೇವೆ. 50 ವರ್ಷದ ಇತಿಹಾಸದಲ್ಲಿ ಈ ಕೆಲಸವನ್ನ ಯಾರು ಮಾಡಿರಲಿಲ್ಲ. 50 ವರ್ಷದಲ್ಲಿ ಆಗಬೇಕಾದ ಕೆಲಸ ಇಂದಿನ ಯಾವ ಸರ್ಕಾರಗಳು ಕೂಡ ಮಾಡಿರಲಿಲ್ಲ. ಬಡವರು ಬಡವರಾಗಿ ಇದ್ದಾರೆ ಶ್ರೀಮಂತರು ಶ್ರೀಮಂತರಾಗೆ ಇದ್ದಾರೆ ಎಂದು ತೇಜಸ್ವಿಸೂರ್ಯ ಹೇಳಿದರು.
28 ಸ್ಥಾನ ಗೆಲ್ಲುವ ವಿಶ್ವಾಸ: ದೇಶದ ಜನತೆ ಎಲ್ಲದಕ್ಕಿಂತ ಮುಖ್ಯವಾಗಿ ಸ್ವಾಭಿಮಾನದಿಂದ ಬದುಕುವಂತೆ ಪ್ರಧಾನಿ ನರೇಂದ್ರ ಮೋದಿ ವಾತಾವರಣ ನಿರ್ಮಿಸಿದ್ದಾರೆ. ನನಗೆ ವಿಶ್ವಾಸವಿದೆ ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಎನ್‌ಡಿಎ ಮೈತ್ರಿ ಕೂಟ ಗೆಲ್ಲುತ್ತೆ. ವಿಶೇಷವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸ ನನ್ನದಿದೆ ಎಂದರು.
70 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ಸಿಗೆ ಟಾಯ್ಲೆಟ್ ಕಟ್ಟಲಿಕ್ಕೆ ಆಗಲಿಲ್ಲ. ಇನ್ನು ದೇಶ ಕಟ್ಟುತ್ತಾರಾ? ಹಾಗಾಗಿ ದೊಡ್ಡವರಿಂದ ಮಕ್ಕಳವರೆಗೂ ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದನ್ನು ಬಯಸುತ್ತಾರೆ. ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ